Advertisement

ಕಾಂಗ್ರೆಸ್ಸಿಗರಿಗೆ ಬುದ್ಧಿ ಭ್ರಮಣೆ: ಅಶೋಕ್‌

06:00 PM Aug 11, 2022 | Team Udayavani |

ಮೊಳಕಾಲ್ಮೂರು: ದೇಶದಲ್ಲಿ ಕಾಂಗ್ರೆಸ್‌ ವಿಪಕ್ಷವಾಗಲೂ ನಾಲಾಯಕ್‌. ಕಾಂಗ್ರೆಸ್ಸಿಗರಿಗೆ ಬುದ್ಧಿ ಭ್ರಮಣೆಯಾಗಿದ್ದು, ವರ್ಷ ಕಳೆದರೂ ಕಾಂಗ್ರೆಸ್‌ ಪಕ್ಷಕ್ಕೆ ಅಧ್ಯಕ್ಷರನ್ನು ನೇಮಕ ಮಾಡುವ ಯೋಗ್ಯತೆ ಇಲ್ಲ. ನಮ್ಮ ಪಕ್ಷದ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಕಾಂಗ್ರೆಸ್ಸಿನವರಿಗೆ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದಾರೆಯೇ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಪ್ರಶ್ನಿಸಿದರು.

Advertisement

ಮೊಳಕಾಲ್ಮೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಬಳಿಕ ಕಾಂಗ್ರೆಸ್ಸಿನಲ್ಲಿ ಒಳಜಗಳ ಹೆಚ್ಚಾಗಿದೆ. ಇದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹಾಗೂ ಜಮೀರ್‌ ಆಟವಾದರೆ, ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್‌ ಬೆಂಬಲಿಗರ ಆಟವಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ಗೊಂದಲ ಮನೆ ಮಾಡಿದ್ದು, ಅದು ಕೊಳೆತು ನಾರುತ್ತಿದೆ. ಇದನ್ನು ಮರೆಮಾಚಲು ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ವದಂತಿ ಟ್ವೀಟ್‌ ಮಾಡುತ್ತಿದ್ದಾರೆ ಎಂದರು.

ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ:
ಮುಖ್ಯಮಂತ್ರಿ ಬದಲಾವಣೆ ವದಂತಿ ಸೃಷ್ಟಿಸಿರುವುದು ಕಾಂಗ್ರೆಸ್ಸಿನ ಬಲಹೀನತೆಯಾಗಿದೆ. ರಾಜ್ಯಾದ್ಯಂತ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಾಗಿದೆ. ವಿಪಕ್ಷವಾಗಿ ಎಲ್ಲಿಯೂ ಜನರ ಜತೆ ನಿಲ್ಲುತ್ತಿಲ್ಲ. ಬಸವರಾಜ ಬೊಮ್ಮಾಯಿ ಸರಳ ಮುಖ್ಯಮಂತ್ರಿ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಿಎಂ ಸಹ ಬೊಮ್ಮಾಯಿ ಎಂದು ಹೇಳಿದ್ದೇವೆ.

ಕಾಂಗ್ರೆಸ್ಸಿಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಲಿ. ಒಂದು ವೇಳೆ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದರೆ ಸಿದ್ದು ಕಾಂಗ್ರೆಸ್‌, ಡಿಕೆ ಕಾಂಗ್ರೆಸ್ಸಾಗಿ ವಿಭಜನೆಯಾಗುತ್ತದೆ. ನಮಗೆ ನರೇಂದ್ರ ಮೋದಿ ನಾಯಕತ್ವ ಇದೆ, ನಿಮಗೆ ನಾಯಕತ್ವ ಇಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ತಟ್ಟೆಯ ನೊಣ ನೋಡಲು ಬರಬೇಡಿ ಎಂದರು.

ಸಿದ್ದರಾಮಯ್ಯ ಜನತಾದಳದ ಟ್ರೇನಿಂಗ್‌ ಕ್ಯಾಂಪಿನಿಂದ ಕಾಂಗ್ರೆಸ್‌ ಪಕ್ಷಕ್ಕೆ ಬಂದವರು. ಪಕ್ಷಾಂತರ ಮಾಡಿದವರೇ ಹೆಚ್ಚು ಜೋರಾಗಿ ಮಾತಾಡೋದು. ನಮ್ಮ ಪಕ್ಷದ ಅಧ್ಯಕ್ಷರು ಪಕ್ಕಾ ಇಂಡಿಯನ್‌, ಬೇರೆ ದೇಶದಿಂದ ಬಂದಿಲ್ಲ. ದೇಶದ ಬಗ್ಗೆ ಗೌರವ ಇಲ್ಲದವರು. ಆರೆಸ್ಸೆಸ್‌ ಕಚೇರಿ ಮೇಲೆ ಹಲವು ವರ್ಷಗಳಿಂದ ರಾಷ್ಟ್ರಧ್ವಜ ಹಾರಾಡುತ್ತಿದೆ. ಈ ವಿಚಾರ ಗೊತ್ತಿಲ್ಲದೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next