ಮಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ನನಗೆ ಕಾಂಗ್ರೆಸ್ ಹಿರಿಯ ನಾಯಕರು ಕರಾವಳಿಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಗುರುತರ ಜವಾಬ್ದಾರಿ ವಹಿಸಿದ್ದಾರೆ. ಅದಕ್ಕಾಗಿ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿಯಷ್ಟೇ ಆಸಕ್ತಿಯಿಂದ ಶ್ರಮಿಸಬೇಕಾಗಿದೆ ಎಂದು ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಡಾ| ಮಂಜುನಾಥ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಯುವಕರಿಗೆ ಅಭ್ಯರ್ಥಿ ಸ್ಥಾನ ನೀಡಬೇಕು ಎಂಬ ಕಾರ್ಯಕರ್ತರ ಬಲವಾಗಿತ್ತು. ಅದನ್ನು ನಾಯಕರು ನಡೆಸಿಕೊಟ್ಟಿದ್ದಾರೆ, ಈಗ ಪಕ್ಷವನ್ನು ಗೆಲ್ಲಿಸಲು ನಾವು ಕೆಲಸ ಮಾಡಬೇಕಾಗಿದೆ ಎಂದರು.
ಯಾವುದೇ ಕಳಂಕವಿಲ್ಲದ, ವಿವಿಧ ಸೇವಾ ಕ್ಷೇತ್ರಗಳಲ್ಲಿ, ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಪದ್ಮರಾಜ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಅವರ ಮೇಲೆ ಯಾವುದೇ ಒತ್ತಡ ಹಾಕದೆ, ನಾವೆಲ್ಲರೂ ಅಭ್ಯರ್ಥಿಗಳು ಎನ್ನುವ ನೆಲೆಯಲ್ಲಿ ಕೆಲಸ ಮಾಡುತ್ತೇವೆ ಎಂದರು.
ಎ. 2ರಂದು ಉಡುಪಿ -ಚಿಕ್ಕಮಗಳೂರು ಅಭ್ಯರ್ಥಿ ಜಯ ಪ್ರಕಾಶ್ ಹೆಗ್ಡೆ ಹಾಗೂ ಎ. 3ರಂದು ಪದ್ಮರಾಜ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಎಐಸಿಸಿಯಲ್ಲಿ ಹಲವು ಹುದ್ದೆಗಳಲ್ಲಿ ನಿರ್ವಹಿಸಿದ್ದೇನೆ. 45 ವರ್ಷಗಳ ಸೇವೆ ಮಾಡಿದ್ದು, ಈಗ ರಾಜ್ಯದ ಎಲ್ಲ ನಾಯಕರ ಶಿಫಾರಸಿನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಕಾಶ ನೀಡಿದ್ದಾರೆ ಎಂದರು.
ಸ್ವಾಗತ: ಕಾರ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ| ಮಂಜುನಾಥ ಭಂಡಾರಿ ಮಂಗಳವಾರ ಬೆಳಗ್ಗೆ ಬೆಂಗ ಳೂರಿನಿಂದ ಆಗಮಿಸಿದಾಗ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು.