ಕೊಪ್ಪಳ: ಕೊಪ್ಪಳ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕುಕನೂರು ಪಪಂ ಅಧಿಕಾರದ ಗದ್ದುಗೆ ಕಾಂಗ್ರೆಸ್ ವಶವಾಗಿದೆ. ಸಚಿವ ಹಾಲಪ್ಪ ಆಚಾರ್ ಅವರಿಗೆ ಸ್ವ ಕ್ಷೇತ್ರದಲ್ಲೇ ತೀವ್ರ ಮುಖಭಂಗವಾಗಿದೆ.
ಕುಕನೂರು ಪಪಂ ಒಟ್ಟು 19 ಸದಸ್ಯ ಸ್ಥಾನದಲ್ಲಿ ಕಾಂಗ್ರೆಸ್ 10 ಸ್ಥಾನ ಗೆದ್ದರೆ, ಬಿಜೆಪಿ 9 ಸ್ಥಾನ ಗೆದ್ದಿದೆ. ವಿಶೇಷವೆಂಬಂತೆ ಸಚಿವ ಹಾಲಪ್ಪ ಆಚಾರ್ ಅವರ ಸ್ವ ಕ್ಷೇತ್ರ ಇದಾಗಿದೆ. ತಮ್ಮ ಕ್ಷೇತ್ರದಲ್ಲಿ ಪಪಂ ಆಡಳಿತ ಕೈ ವಶವಾಗಿದ್ದು, ಸಚಿವರಿಗೆ ತೀವ್ರ ನಿರಾಸೆ ತರಿಸಿದೆ.
ಇದನ್ನೂ ಓದಿ:ಬಿಡದಿ ಪುರಸಭೆಯಲ್ಲಿ ಜೆಡಿಎಸ್ ಗೆ ಅಧಿಕಾರ: ಎಲ್ಲಾ ವಾರ್ಡುಗಳಲ್ಲಿ ಠೇವಣಿ ಕಳೆದುಕೊಂಡ ಬಿಜೆಪಿ
ಈ ಬಾರಿ ಪಪಂ ಚುನಾವಣೆಯಲ್ಲಿ ಹಾಲಿ ಸಚಿವ ಹಾಲಪ್ಪ ಆಚಾರ್, ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ಜಿದ್ದಿಗೆ ಬಿದ್ದು ಚುನಾವಣಾ ಪ್ರಚಾರ ನಡೆಸಿ ಮತದಾರರಿಂದ ಮತ ಕೇಳಿದ್ದರು. ಇಬ್ಬರಿಗೂ ಇದು ಪ್ರತಿಷ್ಠೆಯ ಚುನಾವಣೆಯಾಗಿತ್ತು.
ಈ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನ, ಬಿಜೆಪಿ 8 ಸ್ಥಾನ ಪಡೆದಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಬಿಜೆಪಿಯ ನಾಮ ನಿರ್ದೇಶಿತ ಸದಸ್ಯರ ಮತ ಸೇರಿ ಓರ್ವ ಕೈ ಸದಸ್ಯನ ಆಪರೇಷನ್ ಮಾಡಿದ್ದರಿಂದ ಪಪಂ ಕಮಲದ ವಶವಾಗಿತ್ತು. ಈಗ ಮತ್ತೆ ಪಪಂ ಕೈ ವಶವಾಗಿದೆ. ಸಚಿವರಿಗೆ ಸ್ವ ಕ್ಷೇತ್ರದಲ್ಲಿ ತೀವ್ರ ನಿರಾಸೆ ಮೂಡಿಸಿದೆ.