ಉತ್ತರಪ್ರದೇಶ: ಮುಂಬರುವ ವಿಧಾನಸಭಾ ಉಪಚುನಾವಣೆಗಾಗಿ ಅತ್ಯಾಚಾರ ಆರೋಪಿಗಳನ್ನು ಕಣಕ್ಕಿಳಿಸುತ್ತಿರುವ ಹಿಂದಿನ ನಿರ್ಧಾರವನ್ನು ಪ್ರಶ್ನಿಸಿದಕ್ಕೆ ಮಹಿಳಾ ಕಾಂಗ್ರೆಸ್ ಸದಸ್ಯೆಯ ಮೇಲೆ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸದಸ್ಯೆ ತಾರಾ ಯಾದವ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಯಾದವ್, ಅತ್ಯಾಚಾರ ಆರೋಪಿ ಮುಕುಂದ್ ಭಾಸ್ಕರ್ ಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಲು ಟಿಕೆಟ್ ನೀಡಿರುವುದನ್ನು ಪ್ರಶ್ನಿಸಿದಕ್ಕೆ ಕಾರ್ಯಕರ್ತರೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪ್ರಿಯಾಂಕ ಗಾಂಧಿ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಾತ್ರವಲ್ಲದೆ ಒಂದು ಕಡೆ ಪಕ್ಷದ ನಾಯಕರು ಹತ್ರಾಸ್ ಪ್ರಕರಣಕ್ಕೆ ನ್ಯಾಯ ಕೊಡಿಸಲು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಆದರೇ ಮತ್ತೊಂದೆಡೆ ಅತ್ಯಾಚಾರ ಆರೋಪವಿರುವ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತಿದೆ. ಇದೊಂದು ಕೆಟ್ಟ ಬೆಳವಣಿಗೆ. ಇದು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ನಿರ್ಧಾರ ಎಂದು ತಾರಾ ಯಾದವ್ ಕಿಡಿಕಾರಿದ್ದಾರೆ.
ಮುಕುಂದ್ ಭಾಸ್ಕರ್ ಮಣಿ ತ್ರಿಪಾಠಿ ಹಲವು ಕಾಲದಿಂದ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಇದೀಗ ಆವರಿಗೆ ದಿಯೋರಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ವತಿಯಿಂದ ಟಿಕೆಟ್ ನೀಡಲಾಗಿತ್ತು.