Advertisement

Congress ರಾಜ್ಯದಲ್ಲಿ 18-20 ಲೋಕಸಭಾ ಸ್ಥಾನ‌ ಗೆಲ್ಲಲಿದೆ: ವಿನಯ್ ಕುಲಕರ್ಣಿ

10:37 PM Aug 26, 2023 | Team Udayavani |

ಧಾರವಾಡ: ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷವು 18-20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು.

Advertisement

ಚೆನ್ನಮ್ಮನ ಕಿತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಒಂದೇ ಸಮಾಜವನ್ನು ಮುಂದಿಟ್ಟುಕೊಂಡು ಚುನಾವಣೆ ಸ್ಪರ್ಧಿಸೋದಿಲ್ಲ. ನಾವ್ಯಾರೂ ಇಂತದ್ದೇ ಸಮಾಜದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿ ಬಂದಿಲ್ಲ. ನಾವು ಬಸವ ತತ್ವ ಸಿದ್ಧಾಂತದಿಂದ ಬೆಳೆದು ಬಂದಿದ್ದೇವೆ. ನಾವು ಒಂದು ಸಮಾಜದಲ್ಲಿ ಹುಟ್ಟಿದ್ದೇವೆ ಎಂದರೆ ಆ ಸಮಾಜ ನಮ್ಮ ಮಾತು ಕೇಳಬಹುದಷ್ಟೇ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತ ಸಿಗಬಹದು ಎಂದರು.

ನಮ್ಮ ಸಮಾಜದಲ್ಲಿ ಹಲವು ನಾಯಕರಿದ್ದಾರೆ. ನನ್ನ ಪರವಾಗಿ ನನ್ನ ಪತ್ನಿ ಪ್ರಚಾರ ಮಾಡಿದ್ದಾಳೆ. ಆಗ ಪರಿಸ್ಥಿತಿ ಹಾಗಿತ್ತು. ಆ ಸಮಯದಲ್ಲಿ ನಮಗೆಲ್ಲ ಬಹಳ ತೊಂದರೆ ಕೊಟ್ಟಿದ್ದಾರೆ. ನಮ್ಮ ಬೆಂಬಲಿಗರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ನನ್ನ ಮೇಲೆ ಸಾಕಷ್ಟು ಕೇಸ್ ದಾಖಲಿಸಿದ್ದಾರೆ. ಇವತ್ತಿಗೂ ನಾನು ಕೋರ್ಟ್‌ಗೆ ಅಲೆದಾಡುತ್ತಿದ್ದೇನೆ. ಈಗ ಲೋಕಸಭಾ ಚುನಾವಣೆ ಬಂದಿರುವುದರಿಂದ ಮತ್ತೆ ಐಟಿ ರೇಡ್ ಮಾಡಿಸುತ್ತಿದ್ದಾರೆ. ಜನತೆ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದರು.

ಬಿಜೆಪಿಯ ಸ್ವ ಪಕ್ಷದವರೇ ಈಗ ಮೋದಿ ಅವರನ್ನು ರಸ್ತೆ ಬದಿ ನಿಂತು ನೋಡಬೇಕಾಗಿದೆ. ಇನ್ನು ಬೇರೆ ಪಕ್ಷದವರ ಗತಿ ಏನು? ತೆರಿಗೆ ಸಂದಾಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಅನುದಾನವನ್ನು ಕೇಂದ್ರ ನಮ್ಮ ರಾಜ್ಯಕ್ಕೆ ವಾಪಸ್ ಕೊಡುತ್ತಿಲ್ಲ. ಅಕ್ಕಿಗೆ ಹುಳು ಬೀಳುತ್ತಿವೆ. ನಮ್ಮ ರಾಜ್ಯಕ್ಕೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ. ಹಣ ಕೊಡುತ್ತೇವೆ ಎಂದರೂ ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಶಿವಲೀಲಾ ಕುಲಕರ್ಣಿ ಸ್ಪರ್ಧಿಸುವ ವಿಚಾರ ನಮಗೆ ಗೊತ್ತಿಲ್ಲ. ಅದು ಮಾಧ್ಯಮದಲ್ಲಿ ಮಾತ್ರ ಬಂದಿದೆ. ಟಿಕೆಟ್ ಕೊಡಿ ಎಂಬುದಾಗಿ ನಾವು ಕೇಳಿಲ್ಲ. ಆ ವಿಚಾರದ ಬಗ್ಗೆ ನಾವು ಚರ್ಚೆಯನ್ನೂ ಮಾಡಿಲ್ಲ. ಈಗಾಗಲೇ ನಾವು ವಿಧಾನಸಭಾ ಚುನಾವಣೆ ಮಾಡಿದ್ದೇವೆ. ಈಗ ಮತ್ತೆ ಟಿಕೆಟ್ ಕೇಳುವ ವಿಚಾರ ಇಲ್ಲ ಎಂದರು.

Advertisement

ದೇಶದಲ್ಲಿ ಹಿಟ್ಲರ್ ಆಡಳಿತ ಬರುತ್ತಿದೆ. ದೇಶದ ಜನ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇವತ್ತು ಬಿಜೆಪಿಯ ಸ್ವಪಕ್ಷದ ನಾಯಕರೇ ತಮ್ಮ ನಾಯಕ ಮೋದಿ ಅವರನ್ನು ರಸ್ತೆ ಬದಿ ನಿಂತು ನೋಡಬೇಕಾದ ಪರಿಸ್ಥಿತಿ ಬಂದಿದೆ. ಮೋದಿ ಅವರ ವಿರುದ್ಧ ನಾವು ಮಾತನಾಡಿದರೆ ನಮ್ಮನ್ನು ಜೈಲಿಗೆ ಕಳುಹಿಸುವ ಕೆಲಸ ನಡೆಯುತ್ತದೆ ಎಂದು ವ್ಯಂಗ್ಯವಾಡಿದರು

Advertisement

Udayavani is now on Telegram. Click here to join our channel and stay updated with the latest news.

Next