Advertisement

ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದಿಲ್ಲ: ಬಿಎಸ್‌ವೈ

11:13 PM Nov 04, 2019 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರುವವರೆಗೂ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಸೋಮವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರುವವರೆಗೂ ಆ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಇನ್ನೂ ಮೂರೂವರೆ ವರ್ಷ ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಹತಾಶೆಯಿಂದ ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

Advertisement

ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವ ಬದಲು ತಾಕತ್ತಿದ್ದರೆ ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದು ತೋರಿಸಿ ಎಂದು ಪ್ರತಿಪಕ್ಷಗಳಿಗೆ ಸವಾಲು ನೀಡಿದ ಯಡಿಯೂರಪ್ಪ, ನೀವು ಏನೇ ಆರೋಪ ಮಾಡಿದರೂ ಜನರು ನಿಮ್ಮ ಸುಳ್ಳುಗಳನ್ನು ನಂಬುವುದಿಲ್ಲ ಎಂದರು. ಸಿದ್ದರಾಮಯ್ಯ ನಾಯಕತ್ವದಲ್ಲೇ ಕಾಂಗ್ರೆಸ್‌ ಲೋಕಸಭಾ ಚುನಾವಣೆ ಎದುರಿಸಿದೆ. ಅವರ ಯೋಗ್ಯತೆಗೆ ಒಂದು ಸ್ಥಾನ ಗೆದ್ದಿದ್ದಾರೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು.

ಆದರೆ, ಕಾಂಗ್ರೆಸ್‌ ನಿಮ್ಮನ್ನು ಹೇಗೆ ಪ್ರತಿಪಕ್ಷದ ನಾಯಕನಾಗಿ ಮಾಡಿದೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್‌ಗೆ ಕೊನೇ ಮೊಳೆ ಹೊಡೆಯುವುದು ನೀವೇ ಎಂದರು. ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಅವರು ತಮ್ಮದೇ ಆದ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದನ್ನು ಸುಪ್ರೀಂಕೋರ್ಟ್‌ ಗಮನಕ್ಕೂ ತಂದಿದ್ದಾರೆ. ಇನ್ನೇನು ತೀರ್ಪು ಪ್ರಕಟವಾಗಲಿದೆ ಎಂಬ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದರು.

ಸತ್ಯ ಶೋಧನೆ ಮಾಡಿ: ಕಾಂಗ್ರೆಸ್‌, ಜೆಡಿಎಸ್‌ನ 17 ಶಾಸಕರು ಏಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಅವರು ನಿಯಮಬದ್ಧವಾಗಿ ಕೊಟ್ಟ ರಾಜೀನಾಮೆಯನ್ನು ನೀವು ಅಂಗೀಕರಿಸಿದ್ದರೆ ಈ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಅಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಿತೂರಿ ನಡೆಸಿ ರಾಜೀನಾಮೆ ಪತ್ರವನ್ನೇ ಅಂಗೀಕರಿಸಲಿಲ್ಲ. ಪುನಃ ರಾಜೀನಾಮೆ ಕೊಟ್ಟರೂ ನಿಯಮಬದ್ಧವಾಗಿ ನೀಡಿಲ್ಲ ಎಂದು ಆಕ್ಷೇಪಿಸಿದ್ದೀರಿ. 17 ಮಂದಿ ಶಾಸಕರನ್ನು ಮಾತನಾಡಿಸಿ, ಅವರಿಂದಲೇ ಕೇಳಿ ಏಕಾಗಿ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಹೇಳುತ್ತಾರೆ ಎಂದು ವಾಗ್ಧಾಳಿ ನಡೆಸಿದರು.

ನಾನು ವಿಡಿಯೋದಲ್ಲಿ ಏನು ಮಾತನಾಡಿದ್ದೇನೆ ಎಂಬುದು ನನಗೆ ಗೊತ್ತಿದೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿರುವುದನ್ನು ಯಾರು ಚಿತ್ರೀಕರಿಸಿದರು ಎಂಬುದು ಗೊತ್ತಿಲ್ಲ. ನನ್ನ ಹೇಳಿಕೆಯಿಂದ ನ್ಯಾಯಾಲಯದಲ್ಲಿ ಅನರ್ಹರಿಗೆ ಯಾವುದೇ ರೀತಿಯ ಹಿನ್ನಡೆ ಉಂಟಾಗುವುದಿಲ್ಲ. ಖಂಡಿತ ಅವರಿಗೆ ನ್ಯಾಯ ಸಿಗಲಿದೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಅವರು ಕಾಂಗ್ರೆಸ್‌, ಜೆಡಿಎಸ್‌ ಅಥವಾ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ. ಅದು ಅವರಿಗೆ ಸಂಬಂಧಿಸಿದ ವಿಷಯ. ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದರು.

Advertisement

ಗೊಂದಲ ಸೃಷ್ಟಿಸಬೇಡಿ: ನೆರೆ ಸಂತ್ರಸ್ತರಿಗೆ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯವನ್ನು ಜಾಹೀರಾತಿನಲ್ಲಿ ನೀಡಿದರೆ, ಅದಕ್ಕೂ ಟೀಕೆ ಮಾಡುತ್ತೀರಿ. ನಾವು ನೀಡಿರುವ ಲೆಕ್ಕ ಸರಿಯಿಲ್ಲ ಎಂದಾದರೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಅದನ್ನು ಬಿಟ್ಟು ಸಂತ್ರಸ್ತರಲ್ಲಿ ಏಕೆ ಗೊಂದಲ ಸೃಷ್ಟಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರನ್ನು ಯಡಿಯೂರಪ್ಪ ಪ್ರಶ್ನೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next