Advertisement

ಕೆಲಸ ಆಪ್‌ ನದ್ದು ಪ್ರಚಾರ ಕಾಂಗ್ರೆಸ್‌ ನದ್ದು!

09:48 AM Mar 13, 2019 | Karthik A |

ನವದೆಹಲಿ: ದೇಶದೆಲ್ಲೆಡೆ ಮಹಾಚುನಾವಣೆಯ ಕಾವು ಏರತೊಡಗಿದೆ. ಇದಕ್ಕೆ ಪೂರಕವಾಗಿ ವಿವಿಧ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಮೂಲಕ ಯುವ ಮತದಾರರನ್ನು ಸೆಳೆಯಲು ಭರ್ಜರಿ ತಯಾರಿಯನ್ನು ನಡೆಸುತ್ತಿವೆ. ಅದಕ್ಕಾಗಿ ತಮ್ಮ ಪಕ್ಷದ ಸಾಧನೆಗಳನ್ನು ಹಾಗೂ ಎದುರಾಳಿ ಪಕ್ಷದ ವೈಫ‌ಲ್ಯಗಳನ್ನು ತೋರಿಸುವ ಚಿತ್ರಗಳನ್ನು, ವಿಡಿಯೋಗಳನ್ನು ತಮ್ಮ ತಮ್ಮ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣ ಅಕೌಂಟ್‌ ಗಳಲ್ಲಿ ಪೋಸ್ಟ್‌ ಮಾಡುವ ಮೂಲಕ ಯುವ ಮತದಾರರಿಗೆ ಹತ್ತಿರವಾಗುವ ಪ್ರಯತ್ನವನ್ನು ಎಲ್ಲಾ ಪಕ್ಷಗಳೂ ಪ್ರಾರಂಭಿಸಿವೆ.

Advertisement

ಆದರೆ ದೆಹಲಿ ಕಾಂಗ್ರೆಸ್‌ ಘಟಕವು ಈ ರೀತಿಯ ಪ್ರಚಾರ ಪೋಸ್ಟ್‌ ನಲ್ಲಿ ಒಂದು ಎಡವಟ್ಟು ಮಾಡಿಕೊಂಡುಬಿಟ್ಟಿದೆ. ‘ದೆಹಲಿಯಲ್ಲಿ ಶಿಕ್ಷಣಕ್ಕೆ ಮಹತ್ವ ನೀಡಿದ್ದು ಕಾಂಗ್ರೆಸ್‌ ಸರಕಾರ’ ಎಂಬ ಶೀರ್ಷಿಕೆಯಲ್ಲಿ ಮಾಡಿರುವ ಟ್ವೀಟ್‌ ನಲ್ಲಿ ಆಪ್‌ ಸರಕಾರದ ಅವಧಿಯಲ್ಲಿ ನವೀಕರಣಗೊಂಡ ಶಾಲಾ ತರಗತಿಯ ಚಿತ್ರವೊಂದನ್ನು ಹಾಕುವ ಮೂಲಕ ‘ಕೈ’ ಪಕ್ಷವು ಎಡವಟ್ಟು ಮಾಡಿಕೊಂಡಿದೆ. ‘ಕಾಂಗ್ರೆಸ್‌ ನೇ ಹಿ ದಿಲ್ಲೀ ಮೆ ಶಿಕ್ಷಾ ಕೋ ಪ್ರಾಥಮಿಕ್ತಾ’ ಎಂಬ ಶೀರ್ಷಿಕೆಯೊಂದಿಗೆ ದೆಹಲಿ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿಯು ಸ್ಮಾರ್ಟ್‌ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಪಾಠ ಕೇಳುತ್ತಿರುವ ಫೊಟೋವನ್ನು ಪೋಸ್ಟ್‌ ಮಾಡಿತ್ತು. ಆದರೆ ಈ ಚಿತ್ರ 2017ರಲ್ಲಿ ತೆಗೆಯಲಾಗಿದ್ದು ಎಂದು ಗೊತ್ತಾಗಿದೆ.

ಆಪ್‌ ಸರಕಾರದಲ್ಲಿ ಶಿಕ್ಷಣ ಮಂತ್ರಿಯಾಗಿರುವ ಮನೀಶ್‌ ಸಿಸೋಡಿಯಾ ಅವರ ಪರಿಕಲ್ಪನೆಯಲ್ಲಿ ದೆಹಲಿಯ ಸರಕಾರೀ ಶಾಲೆಗಳಿಗೆ ಹೊಸತನವನ್ನು ನೀಡುವ ಉದ್ದೇಶದಿಂದ ಈ ರೀತಿಯ ಮಾದರಿ ತರಗತಿಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ಆಧುನೀಕರಣ ಯೋಜನೆಯಡಿಯಲ್ಲಿ ನಿರ್ಮಿಸಲಾಗುವ ಶಾಲೆಗಳಲ್ಲಿ ಯೋಗ ತರಗತಿಗಳು, ಸಂಗೀತ ತರಬೇತಿ ಕೋಣೆಗಳು, ಗಣಿತ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ. ಈ ಕುರಿತಾದ ವರದಿಯೊಂದು ಪ್ರಮುಖ ಆಂಗ್ಲ ದಿನಪತ್ರಿಕೆಯೊಂದರಲ್ಲಿ ಪ್ರಕಟವೂ ಆಗಿತ್ತು. 
ಈ ಕುರಿತಾಗಿ ಆಮ್‌ ಆದ್ಮಿ ಪಕ್ಷದ ನಾಯಕಿ ಮತ್ತು 2018ರವರೆಗೆ ಮನೀಶ್‌ ಸಿಸೋಡಿಯಾ ಅವರಿಗೆ ಸಲಹೆಗಾರರಾಗಿ ಕೆಲಸ ಮಾಡಿದ್ದ ಅತೀಶಿ ಅವರು ಟ್ವೀಟ್‌ ಮಾಡಿದ್ದಾರೆ. ಮತ್ತು ದೆಹಲಿಯಲ್ಲಿ ಆಪ್‌ ಮಾಡಿರುವ ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗಳನ್ನು ಕಾಂಗ್ರೆಸ್‌ ತನ್ನದೆಂದು ಹೇಳಿಕೊಂಡು ತಿರುಗಾಡುತ್ತಿದೆ ಎಂದು ಅವರು ಕಾಂಗ್ರೆಸ್‌ ಮುಖಂಡರ ಕಾಲೆಳೆದಿದ್ದಾರೆ.

ಈ ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಶಾಲೆಗಳಿಗೆ ಅಗತ್ಯವಿದ್ದ ಡೆಸ್ಕ್ ಗಳನ್ನು ತಿಹಾರ್‌ ಜೈಲಿನಿಂದ ತರಿಸಿಕೊಳ್ಳಲಾಗುತ್ತಿತ್ತು. ಆದರೆ ಅಲ್ಲಿಂದ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿರಲಿಲ್ಲವಾದ ಕಾರಣ ಆಪ್‌ ಸರಕಾರವು 2016ರಲ್ಲಿ ಟೆಂಡರ್‌ ಮೂಲಕ ನೀಲಿ ಬಣ್ಣದ ಡೆಸ್ಕ್ ಗಳನ್ನು ಸರಕಾರಿ ಶಾಲೆಗಳಿಗೆ ಪೂರೈಸಿತ್ತು. ಅದೇ ಚಿತ್ರವನ್ನು ಇದೀಗ ಕಾಂಗ್ರೆಸ್‌ ತನ್ನ ಸಾಧನೆಯ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಇನ್ನು ದೆಹಲಿ ಪ್ರಾದೇಶಿಕ ಕಾಂಗ್ರೆಸ್‌ ಸಮಿತಿಯ ಈ ಟ್ವೀಟ್‌ ಅನ್ನು ದೇಶಾದ್ಯಂತ ವಿವಿಧ ಭಾಗಗಳ ಕಾಂಗ್ರೆಸ್‌ ನಾಯಕರು ಮತ್ತು ವಿವಿಧ ಐಟಿ ಸೆಲ್‌ ಗಳು ಶೇರ್‌ ಮಾಡಿಕೊಂಡಿದ್ದಾರೆ.

Advertisement

ಫೊಟೋ ಕೇವಲ ಸಾಂಕೇತಿಕವಷ್ಟೇ:
ತಮ್ಮ ಈ ಟ್ವೀಟ್‌ ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್‌, ತಾನು ಬಳಸಿರುವ ಫೊಟೋ ಕೇವಲ ಸಾಂಕೇತಿಕವಷ್ಟೇ. ಶೀಲಾ ದೀಕ್ಷಿತ್‌ ಅವಧಿಯಲ್ಲಿ ದೆಹಲಿಯಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಬಹಳಷ್ಟು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು ಮತ್ತು ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಲಾಗಿತ್ತು ಎಂಬುದನ್ನು ಹೇಳುವುದಷ್ಟೇ ನಮ್ಮ ಉದ್ದೇಶವಾಗಿತ್ತು ಎಂದು ಕಾಂಗ್ರೆಸ್‌ ಐಟಿ ವಿಭಾಗದ ಹಿರಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next