ಬೆಂಗಳೂರು: ಶನಿವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಟೀಕಿಸಿದೆ. ಮೋದಿಯವರಿಗೆ ಪಾಕ್ ಮತ್ತು ಚೀನಾ ಹೆಸರು ಹೇಳಲು ಏಕೆ ಭಯ ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, “ಹಿಂದಿನಂತೆಯೇ ಈಗಲೂ ವಿಶ್ವಸಂಸ್ಥೆಯ ತಮ್ಮ ಭಾಷಣದಲ್ಲಿ ಪಾಕಿಸ್ತಾನ, ಚೀನಾದ ಹೆಸರು ಹೇಳಲು 56 ಇಂಚಿನ ಎದೆಯವರು ಭಯಪಟ್ಟಿದ್ದಾರೆ. ಪಾಕ್‌ನ ಭಯೋತ್ಪಾದನೆಗೆ ಕುಮ್ಮಕ್ಕು ಹಾಗೂ ಚೀನಾದ ಅತಿಕ್ರಮಣವನ್ನು ಜಾಗತಿಕ ವೇದಿಕೆಯಲ್ಲಿ ನೇರವಾಗಿ ಪ್ರಸ್ತಾಪಿಸಲು ಹಿಂಜರಿದಿದ್ದಾರೆ. ಪ್ರಧಾನಿ ಮೋದಿಯವರಿಗೆ ಪಾಕ್, ಚೀನಾದ ಹೆಸರು ಹೇಳಲು ಏಕೆ ಅಷ್ಟು ಭಯ? ಎಂದು ಕೇಳಿದೆ.
ಇನ್ನು ಶನಿವಾರ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ವಿಷಯವನ್ನುಂಟುಕೊಂಡು ಪಾಕ್ ಹಾಗೂ ಚೀನಾ ದೇಶಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಭಯೋತ್ಪಾದನೆ ರಾಜಕೀಯ ಅಸ್ತ್ರವಾಗಿ ಬಳಸಬಾರದು. ‘ಉಗ್ರ’ ಪೋಷಕ ರಾಷ್ಟ್ರಗಳು ಅದರಿಂದ ತೊಂದರೆ ಎದುರಿಸಲಿವೆ ಎಂದು ಪಾಕ್ ಹೆಸರು ಹೇಳದೆ ಚಾಟಿ ಬೀಸಿದರು.
ತಮ್ಮ ಭಾಷಣದಲ್ಲಿ ಚೀನಾ ವಿರುದ್ಧವೂ ಹರಿಹಾಯ್ದಿರುವ ಮೋದಿ, ವಿಸ್ತರಣಾವಾದ ನಡೆಸುತ್ತಿರುವ ಚೀನಾಗೂ ಮೋದಿ ಪರೋಕ್ಷವಾಗಿ ಕುಟುಕಿದರು. ಆದರೆ, ಈ ಬಾರಿ ನೆಲದ ಮೇಲಿನ ವಿಸ್ತರಣಾವಾದ ಕ್ಕಿಂತ ಹೆಚ್ಚಾಗಿ ಸಮುದ್ರದಲ್ಲಿನ ಅದರ ವಿಸ್ತರಣಾವಾದದತ್ತ ಗಮನಕೊಟ್ಟರು. ಸಮುದ್ರಗಳು ಎಂದರೆ ನಮ್ಮ ಹಿರಿಮೆ ಇದ್ದಂತೆ. ಯಾವುದೇ ಕಾರಣಕ್ಕೂ ಈ ಸಮುದ್ರಗಳನ್ನು ದುರ್ಬಳಕೆಯಾಗಲು ಬಿಡಬಾರದು ಎಂದು ಮೋದಿ ಅವರು ಹೇಳಿದರು.