Advertisement

ಹಳ್ಳಿಹಕ್ಕಿಗೆ ಕಾಂಗ್ರೆಸ್‌ ತಿರುಮಂತ್ರ

10:32 AM Dec 11, 2019 | Team Udayavani |

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಅನರ್ಹ ಶಾಸಕ ಅಡಗೂರು ಎಚ್‌.ವಿಶ್ವನಾಥ್‌ ವಿರುದ್ಧ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ 39,727 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಜತೆಗೆ ಹ್ಯಾಟ್ರಿಕ್‌ ಗೆಲುವು ತಪ್ಪಿಸಿ, ಸೇಡು ತೀರಿಸಿಕೊಂಡಿದ್ದಾರೆ.

Advertisement

ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಬೆಳಗ್ಗೆ 8ಗಂಟೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡೇ ಬಂದ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌, ಒಟ್ಟು 20 ಸುತ್ತುಗಳಲ್ಲಿ ಹಿಂತಿರುಗಿ ನೋಡಲಿಲ್ಲ. ಉಪ ಚುನಾವಣೆಯಲ್ಲಿ ಗೆದ್ದು ರಾಜ್ಯ ಬಿಜೆಪಿ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ಗಿಟ್ಟಿಸುವ ಕನಸು ಕಂಡಿದ್ದ ಹಳ್ಳಿಹಕ್ಕಿ ವಿಶ್ವನಾಥ್‌ಗೆ 52,998 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿ ಹೀನಾಯವಾಗಿ ಸೋಲುಂಡಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್‌ 32,895 ಮತಗಳಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 2008, 2013ರ ಚುನಾವಣೆಯಲ್ಲಿ ಸತತವಾಗಿ ಗೆದ್ದು 2018ರ ಚುನಾವಣೆಯಲ್ಲಿ 8,575 ಮತಗಳ ಅಂತರದಿಂದ ಸೋಲುಕಂಡು ಹ್ಯಾಟ್ರಿಕ್‌ ತಪ್ಪಿಸಿಕೊಂಡಿದ್ದ ಎಚ್‌.ಪಿ.ಮಂಜುನಾಥ್‌, ಒಂದೂವರೆ ವರ್ಷಗಳ ಬಳಿಕ 92,725 ಮತಗಳನ್ನು ಪಡೆದು ವಿಶ್ವನಾಥ್‌ಗೆ ಹ್ಯಾಟ್ರಿಕ್‌ ಗೆಲುವು ತಪ್ಪಿಸಿ ಸೇಟು ತೀರಿಸಿಕೊಂಡಿದ್ದಾರೆ.

ಅರಸು ಅವರ ಗರಡಿಯಲ್ಲಿ ಬೆಳೆದು 40ವರ್ಷ ಕಾಂಗ್ರೆಸ್‌ನಲ್ಲಿದ್ದ ಅಡಗೂರು ಎಚ್‌.ವಿಶ್ವನಾಥ್‌ ಅವರು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಅವರ ಜತೆಗಿನ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್‌ ತೊರೆದು, ಜೆಡಿಎಸ್‌ಗೆ ಬಂದರು. ತಮ್ಮ ಸ್ವಕ್ಷೇತ್ರ ಕೆ.ಆರ್‌.ನಗರದಿಂದ ಹುಣಸೂರಿಗೆ ವಲಸೆ ಬಂದು 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಎಚ್‌.ವಿಶ್ವನಾಥ್‌ 91,667 ಮತಗಳನ್ನು ಪಡೆದು ಜಯಗಳಿಸಿದರೆ, ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ 83,092 ಮತಪಡೆದು 8575 ಮತಗಳ ಅಂತರದಿಂದ ಸೋಲು ಕಂಡಿದ್ದರು.

ಬಿಜೆಪಿಯಿಂದ ಕಣಕ್ಕಿಳಿದಿದ್ದ ಜಿಪಂ ಮಾಜಿ ಸದಸ್ಯ ಜೆ.ಎಸ್‌.ರಮೇಶ್‌ಕುಮಾರ್‌ 6406 ಮತಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಆಡಳಿತಾರೂಢ ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದ ಎಚ್‌.ವಿಶ್ವನಾಥ್‌, ಭಿನ್ನಮತೀಯ ಶಾಸಕರ ಗುಂಪು ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ಪೀಕರ್‌ ತಮ್ಮನ್ನು ಅನರ್ಹರೆಂದು ರೂಲಿಂಗ್‌ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ, ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಪಡೆದುಕೊಂಡರು.

Advertisement

ಈ ಬಾರಿ ಗೆಲ್ಲಿಸಿದರೆ ಯಡಿಯೂರಪ್ಪ ಸರ್ಕಾರದಲ್ಲಿ ಮಂತ್ರಿಯಾಗಿ ಹುಣಸೂರನ್ನು ಹೊಸ ಜಿಲ್ಲೆ ಮಾಡಿ, ಅಭಿವೃದ್ಧಿಪಡಿಸುವ ಕನಸು ಬಿತ್ತಿದರಾದರೂ ಅವರ ಕನಸಿಗೆ ಹುಣಸೂರು ಕ್ಷೇತ್ರದ ಮತದಾರ ಮನ್ನಣೆ ನೀಡಲಿಲ್ಲ. ಸಿದ್ದರಾಮಯ್ಯ ಮಂತ್ರಿ ಮಂಡಲದಲ್ಲಿ ಅಭಿವೃದ್ಧಿ ಪರ್ವ ಆರಂಭಿಸಿದ್ದ ಎಚ್‌.ಪಿ.ಮಂಜುನಾಥ್‌ ಪರ ಮತದಾರ ಒಲವು ತೋರಿದ್ದಾನೆ.

ಮೈತ್ರಿ ಪತನಕ್ಕೆ ಕಾರಣವಾಗಿ ವೈಯಕ್ತಿಕ ಟೀಕೆಗಳಿಂದ ಕಾಂಗ್ರೆಸ್‌-ಜೆಡಿಎಸ್‌ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿದ್ದ ಎಚ್‌.ವಿಶ್ವನಾಥ್‌ರನ್ನು ಸೋಲಿಸಲೇಬೇಕು ಎಂದು ಹಠಕ್ಕೆ ಬಿದ್ದು ಜೆಡಿಎಸ್‌ ತನ್ನ ಸಾಂಪ್ರದಾಯಿಕ ಮತಗಳನ್ನು ಕಾಂಗ್ರೆಸ್‌ ಅಭ್ಯರ್ಥಿಗೆ ವರ್ಗಾಯಿಸಿದ್ದು, ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಖಾತೆ ನೀಡಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್‌ನಿಂದ ಮಾನಸಿಕವಾಗಿ ದೂರಾಗಿರುವ ಶಾಸಕ ಜಿ.ಟಿ.ದೇವೇಗೌಡ ಮತ್ತು ಪರಿವಾರ ರಾಜಕೀಯ ದೂರಾಲೋಚನೆಯ ಕಾರಣಕ್ಕೆ ಕಾಂಗ್ರೆಸ್‌ ಬೆಂಬಲಿಸಿದ್ದರಿಂದ ಎಚ್‌.ಪಿ.ಮಂಜುನಾಥ್‌ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಗೆದ್ದವರು
ಎಚ್‌.ಪಿ.ಮಂಜುನಾಥ್‌ (ಕಾಂಗ್ರೆಸ್‌)
ಪಡೆದ ಮತ: 92,725
ಗೆಲುವಿನ ಅಂತರ‌: 39,727

ಸೋತವರು
ಅಡಗೂರು ಎಚ್‌.ವಿಶ್ವನಾಥ್‌ (ಬಿಜೆಪಿ)
ಪಡೆದ ಮತ: 52,998

ದೇವರಹಳ್ಳಿ ಸೋಮಶೇಖರ್‌(ಜೆಡಿಎಸ್‌)
ಪಡೆದ ಮತ: 32,895

ಗೆದ್ದದ್ದು ಹೇಗೆ?
-ಸೋತರು ಕ್ಷೇತ್ರದ ಜನರೊಂದಿಗೆ ನಿಕಟ ಒಡನಾಟ ಇರಿಸಿಕೊಂಡು, ಜನರ ಕಷ್ಟು ಸುಖಗಳಲ್ಲಿ ಭಾಗಿಯಾಗಿ ಪ್ರಚಾರ

-ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಳೆದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ತಂದು ಮಾಡಿದ ಅಭಿವೃದ್ಧಿ ಕಾರ್ಯ

-ವಿಶ್ವನಾಥ್‌ ಮೈತ್ರಿ ದೋಸ್ತಿ ಸರ್ಕಾರದ ಪತನಕ್ಕೆ ಕಾರಣಕರ್ತರು ಎಂಬ ಕಾರಣಕ್ಕೆ ಜೆಡಿಎಸ್‌ನ ಸಂಪ್ರದಾಯಿಕ ಮತಗಳ ವರ್ಗಾವಣೆ

ವಿಶ್ವನಾಥ್‌ ಸೋತದ್ದು ಹೇಗೆ?
-ದೋಸ್ತಿ ಸರ್ಕಾರದ ಪತನಕ್ಕೆ ಕಾರಣರೆಂದು ದಳಪತಿಗಳು, ವ್ಯಕ್ತಿಗತ ಕಾರಣಕ್ಕೆ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದು.

-ಶಾಸಕರಾದ ನಂತರ ಭಿನ್ನರ ಜತೆ ಮುಂಬೈ ಹೋಟೆಲ್‌ನಲ್ಲಿ ತಿಂಗಳುಗಟ್ಟಲೇ ಇದ್ದು ಕ್ಷೇತ್ರದ ಜನರಿಂದ ದೂರಾಗಿದ್ದು

-ಕ್ಷೇತ್ರದಿಂದ ದೂರಾಗಿ ಉಪ ಚುನಾವಣೆಯ ಹೊಸ್ತಿಲಲ್ಲಿ ಹೊಸ ಜಿಲ್ಲೆ, ಅಭಿವೃದ್ಧಿಯ ಕನಸು ಬಿತ್ತಿದ್ದು ಫ‌ಲ ನೀಡಲಿಲ್ಲ.

ಉಪ ಚುನಾವಣೆಯಲ್ಲಿ ಪ್ರಜಾಪ್ರಭುತ್ವಕ್ಕೆ ಜನ ಮನ್ನಣೆ ಸಿಕ್ಕಿದೆ. ನನ್ನ ಗೆಲುವು ತಾಲೂಕಿನ ಮತದಾರರ ಗೆಲುವಾಗಿದೆ. ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ಬಂದಿದೆ. ಇದು ಸ್ವಾಭಿಮಾನದ ಗೆಲುವು.
-ಎಚ್‌.ಪಿ.ಮಂಜುನಾಥ್‌, ಕಾಂಗ್ರೆಸ್‌ ಅಭ್ಯರ್ಥಿ

ಮತದಾರರು ಕೊಟ್ಟಿರುವ ತೀರ್ಪನ್ನು ಒಪ್ಪಿಕೊಳ್ಳುವೆ. ಅನರ್ಹರನ್ನು ಗೆಲ್ಲಿಸಬೇಡಿ, ಬಿಜೆಪಿ ಸರ್ಕಾರ ಬಿದ್ದು ಹೋಗಲಿದೆ ಎನ್ನುತ್ತಿದ್ದ ವಿರೋಧ ಪಕ್ಷಗಳ ನಾಯಕರಿಗೆ ಈ ಉಪ ಚುನಾವಣೆ ತಕ್ಕ ಪಾಠ ಕಲಿಸಿದೆ.
-ಎಚ್‌.ವಿಶ್ವನಾಥ್‌, ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next