ಚಾಮರಾಜನಗರ: ಮೌಲ್ಯಾಧಾರಿತ ರಾಜಕೀಯ ಇತಿಹಾಸ, ಹಿನ್ನೆಲೆ ಹೊಂದಿರುವ ಪುಟ್ಟಸ್ವಾಮಿ ಅವರ ಪುತ್ರ ಡಾ.ಬಿ.ಪಿ.ನಟರಾಜಮೂರ್ತಿ ಅವರಿಗೆ ಈ ಬಾರಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಬೆಂಗಳೂರಿಗೆ ನಿಯೋಗ ಹೋಗಿ ಕಾಂಗ್ರೆಸ್ ವರಿಷ್ಠರಿಗೆ ಮನವಿ ಸಲ್ಲಿಸಲು ಅಭಿಮಾನಿಗಳ ಸಭೆಯಲ್ಲಿ ನಿರ್ಧರಿಸಲಾಯಿತು. ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಮಾಜಿ ಶಾಸಕ ದಿ.ಎಸ್.ಪುಟ್ಟಸ್ವಾಮಿ ಅಭಿಮಾನಿಗಳ ಬಳಗ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಮಾಜಿ ಶಾಸಕ ಎಸ್.ಪುಟ್ಟಸ್ವಾಮಿ ಅವರ ಪುತ್ರ ಬಿ ಪಿ.ನಟರಾಜಮೂರ್ತಿ ಅವರು ಮತ್ತೆ ಮೌಲ್ಯಾಧಾರಿತ ರಾಜಕಾರಣ ಪ್ರವೇಶಿಸಬೇಕು ಎಂದು ಅಭಿಮಾನಿಗಳು ಮತ್ತು ಮುಖಂಡರು ಒತ್ತಾಯಿಸಿದರು. ಯುಗಾದಿಯ ಬಳಿಕ ಕಾಂಗ್ರೆಸ್ ವರಿಷ್ಠರ ಬಳಿಗೆ ನಿಯೋಗ ಹೋಗಲು ಸಭೆ ನಿರ್ಧರಿಸಿತು.
ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ: ಇದಕ್ಕೂ ಮೊದಲು, ಮಾಜಿ ಶಾಸಕ ಎಸ್.ಪುಟ್ಟಸ್ವಾಮಿ ಅವರ ಪುತ್ರ ಬಿ.ಪಿ. ನಟರಾಜಮೂರ್ತಿ ಮಾತನಾಡಿ, ಕೆಲವು ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದೆ. ಇದರಿಂದ ನಮ್ಮ ತಂದೆಯ ಅಭಿಮಾನಿಗಳಿಗೆ ತೊಂದರೆಯಾಗಿದೆ. ಅದಕ್ಕಾಗಿ ಈ ಮೂಲಕ ಕ್ಷಮೆಯಾಚಿಸುತ್ತೇನೆ. ನಮ್ಮ ಕುಟುಂಬದ ಅಭಿಮಾನಿ ಗಳಿಗೆ, ಕಾರ್ಯಕರ್ತರಿಗೆ ಕೆಲಸಗಳನ್ನು ಮಾಡಿಸಿಕೊಡಲು ಆಗಲಿಲ್ಲ ಎಂದು ಮನನೊಂದು ದೂರ ಉಳಿದಿದ್ದೆ. ಮುಂದಿನ ದಿನಗಳಲ್ಲಿ ಅಭಿಮಾನಿಗಳು ತೆಗೆದು ಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದರು.
ಸಭೆಯಲ್ಲಿ ಮಾತನಾಡಿದ ಅಭಿಮಾನಿ ಗಳು, ಮುಖಂಡರು, ಚಾನಗರ ಕ್ಷೇತ್ರದ ಉದ್ಧಾರಕ್ಕಾಗಿ ಚಿಂತನೆ ಮಾಡಿದವರು ದಿ. ಪುಟ್ಟಸ್ವಾಮಿ ಯವರು, ಇಂದಿನ ರಾಜಕೀಯ ಕಲುಷಿತವಾಗಿದೆ. ಇಂದಿನ ರಾಜಕಾರಣಕ್ಕೆ ಒಳ್ಳೆಯವರು, ಯೋಗ್ಯರು ಬರಬೇಕಿದ್ದು, ಪುಟ್ಟಸ್ವಾಮಿಯವರ ಕುಟುಂಬ ನಾಯಕನ ಸ್ಥಾನವನ್ನು ತುಂಬಬೇಕು ಎಂದು ಮನವಿ ಮಾಡಿದರು.
ಸಕ್ರಿಯ ರಾಜಕೀಯದಲ್ಲಿರಬೇಕಿತ್ತು: ಪುಟ್ಟಸ್ವಾಮಿ ಯವರ ಕುಟುಂಬ ಇಷ್ಟು ದಿನ ಸಕ್ರೀಯ ರಾಜಕಾರಣದಿಂದ ದೂರ ಇದ್ದು, ಅಭಿಮಾನಿಗಳನ್ನು ಅತಂತ್ರ ಮಾಡಿತ್ತು. ಅವರ ಪುತ್ರಿ ಡಾ.ಬಿ.ಪಿ. ಮಂಜುಳಾ ಅವರಿಗೆ ಟಿಕೆಟ್ ನೀಡಿ ಸೋತಾಗ ಸೋಲು ಗೆಲುವುಗಳನ್ನು ಸಮಾನಾಗಿ ಸ್ವೀಕರಿಸಿ. ಸಕ್ರಿ ಯ ರಾಜಕಾರಣದಲ್ಲಿ ಇರಬೇಕಾಗಿತ್ತು, ರಾಜಕಾರಣದಿಂದ ದೂರ ಉಳಿದಿದ್ದು ಸರಿಯಲ್ಲ ಎಂದರು.
ಪಕ್ಷ ಕಟ್ಟಿದ್ದವರು: ಪುಟ್ಟಸ್ವಾಮಿ ಅಭಿಮಾನಿಗಳಾದ ನಾಗಬಸವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದ ಮಾಜಿ ಶಾಸಕರಾದ ಪುಟ್ಟಸ್ವಾಮಿ ಅವರ ಪುತ್ರ ಬಿ.ನಟರಾಜಮೂರ್ತಿಗೆ ಈ ಬಾರಿಯ ಚುನಾವಣೆ ಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ಎಂದು ಕಾಂಗ್ರೆಸ್ ವರಿಷ್ಠರಲ್ಲಿ ಒತ್ತಾಯಿಸಿದರು.
ಪುಟ್ಟಸ್ವಾಮಿ ಅಭಿಮಾನಿಗಳಾದ ಕಾಡಹಳ್ಳಿ ಮಹದೇವಪ್ಪ, ಪಿ.ನಾಗ ಬಸವಣ್ಣ, ಸುಂದ್ರಪ್ಪ, ಯು.ಎಂ.ಪ್ರಭುಸ್ವಾಮಿ, ಗುರುಪಾದಪ್ಪ, ವಿ.ಶ್ರೀನಿವಾಸಪ್ರಸಾದ್, ವೀರೇಶ್, ಕೊಂಗಳಪ್ಪ, ನಾರಾಯಣನಾಯಕ, ಪರಶಿವ ಮೂರ್ತಿ, ಚಾಮುಲ್ ನಿರ್ದೇಶಕ ಸದಾಶಿವ ಮೂರ್ತಿ, ಅಂಕಶೆಟ್ಟಿ ವಕೀಲ ಶಿವಾನಂದಸ್ವಾಮಿ, ಕೊಂಗಳಪ್ಪ, ನಾಗರಾಜು, ಕಾಂತರಾಜು ಮಾತನಾಡಿದರು.ಗುರುಸ್ವಾಮಿ, ಜಯಶಂಕರ್, ಉಮ್ಮತ್ತೂರು ಬಸವರಾಜು ಭಾಗವಹಿಸಿದ್ದರು.