Advertisement

ಚಿಕ್ಕಮಗಳೂರಿನಲ್ಲಿ ಹೆಚ್.ಡಿ ತಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್?; ಡಿಕೆಶಿ ಹೇಳಿದ್ದೇನು?

03:54 PM Feb 19, 2023 | Team Udayavani |

ಬೆಂಗಳೂರು: ಚಿಕ್ಕಮಗಳೂರು ರಾಜ್ಯದ ರಾಜಕೀಯದ ದಿಕ್ಸೂಚಿ ಬದಲಿಸುವ ಜಿಲ್ಲೆಗಳಲ್ಲಿ ಒಂದಾಗಿದ್ದು, ಈ ಜಿಲ್ಲೆಯ ಬಿಜೆಪಿ ನಾಯಕರಾದ ಹೆಚ್.ಡಿ ತಮ್ಮಯ್ಯ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಗಾಳಿ ಬೀಸುವ ಸಂದೇಶವನ್ನು ದೆಹಲಿಗೆ ರವಾನಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Advertisement

ಚಿಕ್ಕಮಗಳೂರಿನ ಬಿಜೆಪಿ ನಾಯಕರಾಗಿದ್ದ ಪುರಸಭೆ ಸದಸ್ಯ, ಅಧ್ಯಕ್ಷರಾಗಿದ್ದ ಹೆಚ್.ಡಿ ತಮ್ಮಣ್ಣ ಹಾಗೂ ಅವರ ಬೆಂಬಲಿಗರನ್ನು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಶಿವಕುಮಾರ್ ಅವರು ‘ಚಿಕ್ಕಮಗಳೂರು ರಾಷ್ಟ್ರಕ್ಕೆ ಹಾಗೂ ರಾಜ್ಯಕ್ಕೆ ರಾಜಕೀಯ ಬದಲಾವಣೆ ಸಂದೇಶ ಕೊಟ್ಟ ಇತಿಹಾಸವಿರುವ ಜಿಲ್ಲೆ. ಈ ಜಿಲ್ಲೆಯ ಜನರು ಪ್ರಜ್ಞಾವಂತರಿದ್ದಾರೆ. ಇಂದು ಪಕ್ಷ ಸೇರುತ್ತಿರುವ ನಾಯಕರುಗಳು ನಿಮ್ಮ ಬೂತ್ ಗಳಲ್ಲಿ ಹೋಗಿ ಹೆಚ್ಚು ಜನರನ್ನು ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ಆ ಮೂಲಕ ನೀವು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಸಂದೇಶ ರವಾನಿಸಬೇಕು ಎಂದರು.

ನಾನು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕಾರ ಮಾಡಿದಾಗ ಒಂದು ಮಾತು ಹೇಳಿದ್ದೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಆ ರೀತಿ ಶಂಕರ್ ಅವರು ಕಳೆದ ಬಾರಿ ಚುನಾವಣೆ ನಂತರ ಚಿಕ್ಕಮಗಳೂರು ಜಿಲ್ಲೆಯ ವೈಎಸ್.ವಿ ದತ್ತಾ, ಹರೀಶ್, ಗೋಪಿಕೃಷ್ಣ, ಶಿವಶಂಕರಪ್ಪ ಸೇರಿದಂತೆ ಬೇರೆ ಪಕ್ಷದ ನಾಯಕರು ಹಾಗೂ ಬಂಡಾಯ ನಾಯಕರು ಸೇರಿ ಒಬ್ಬೊಬ್ಬರಾಗಿ ಪಕ್ಷ ಸೇರುತ್ತಿದ್ದಾರೆ ಎಂದರು.

ತಮ್ಮಣ್ಣ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಾಡಿ ಶಕ್ತಿ ಪ್ರದರ್ಶ ಮಾಡಲು ಆಲೋಚಿಸಿದ್ದೆವು. ಸಂಘಟನೆಗೆ ತೊಂದರೆ ಆಗಬಾರದು ಎಂದು ಇಲ್ಲಿ ಸೇರ್ಪಡೆ ಕಾರ್ಯಕ್ರಮ ಮಾಡುತ್ತಿದ್ದೇವೆ. ಪ್ರಜಾಧ್ವನಿ ಯಾತ್ರೆ ಸಂದರ್ಭದಲ್ಲಿ ಮತ್ತೊಮ್ಮೆ ಈ ಕಾರ್ಯ ಮಾಡಲಾಗುವುದು. ನಾಳೆಯೂ ಪಕ್ಷ ಸೇರ್ಪಡೆ ಕಾರ್ಯಕ್ರಮವಿದ್ದು, ನಾನು ಉಪಸ್ಥಿತನಿರಲು ಆಗುವುದಿಲ್ಲ. ಎಐಸಿಸಿ ನಾಯಕರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಕೆಲವು ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಇನ್ನು ಹಾಲಿ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಕೆಲವರಿಗೆ ನಮ್ಮ ಪಕ್ಷದಲ್ಲಿ ಸ್ಥಾನಮಾನ ನೀಡಲು ಕಷ್ಟವಾಗುತ್ತದೆ. ಮತ್ತೆ ಕೆಲವರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು. ಈಗ ಆ ನಾಯಕರ ಹೆಸರು ಪ್ರಸ್ತಾಪ ಮಾಡುವುದಿಲ್ಲ. ನಾನು ಗಾಳಿಯಲ್ಲಿ ಗುಂಡು ಹೊಡೆದು ಅವರ ರಾಜಕೀಯ ಜೀವನಕ್ಕೆ ಅಡ್ಡಿಪಡಿಸುವುದಿಲ್ಲ ಎಂದರು.

ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವುದಕ್ಕೆ ಈ ಪ್ರಮುಖ ನಾಯಕರುಗಳು ಕಾಂಗ್ರೆಸ್ ಪಕ್ಷ ಸೇರುತ್ತಿರುವುದೇ ಸಾಕ್ಷಿ. ಬಿಜೆಪಿ ರಾಷ್ಟ್ರೀಯ ನಾಯಕರು ಕ್ಷೇತ್ರವಾರು ಪ್ರಚಾರ ಮಾಡುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಅವರು ಸೋಲುವ ಭಯದಲ್ಲಿ ಈ ರೀತಿ ಮಾಡುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಐದು ವರ್ಷಗಳ ಹಿಂದೆ ನೀಡಿದ್ದ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಲು ಈ ಸರ್ಕಾರದಿಂದ ಸಾಧ್ಯವಾಗಲಿಲ್ಲ. ಈ ಸರ್ಕಾರದ ಕೊನೆಯ ಬಜೆಟ್ ನಲ್ಲಿ ಭರವಸೆ ಈಡೇರಿಸುವ ಪ್ರಯತ್ನ ಮಾಡುವ ನಿರೀಕ್ಷೆ ಇತ್ತು. ಅಧಿಕಾರ ಇದ್ದಾಗ ಇವರಿಂದ ಏನು ಮಾಡಲು ಆಗಲಿಲ್ಲ. ಈ ಸರ್ಕಾರ ಕಳೆದ ವರ್ಷ ಮಂಡಿಸಿದ ಬಜೆಟ್ ಅನ್ನು ಜಾರಿಗೊಳಿಸಲು ಸಾಧ್ಯವಾಗಿಲ್ಲ. ಈ ಬಾರಿ ಬಜೆಟ್ ನಲ್ಲಿ ಮತ್ತೆ ಘೋಷಣೆಗಳನ್ನು ನೀಡಿ ಸರ್ಕಾರ ರಾಜ್ಯದ ಜನರ ಕಿವಿಗೆ ಹೂವಿಡುವ ಪ್ರಯತ್ನ ಮಾಡಡಿದೆ. ಇದನ್ನು ಖಂಡಿಸಿ ನಾನು, ನಮ್ಮ ಪಕ್ಷದ ನಾಯಕರು ಕಿವಿಗೆ ಹೂವ ಇಟ್ಟುಕೊಂಡು ಬಜೆಟ್ ಮಂಡನೆ ವೇಳೆ ಸಾಂಕೇತಿಕ ಪ್ರತಿಭಟನೆ ಮಾಡಿದೆವು ಎಂದರು.

Advertisement

ಸರ್ಕಾರದ ಈ ವೈಫಲ್ಯಗಳಿಂದ ಹಳ್ಳಿ ಹಾಗೂ ಬೂತ್ ಮಟ್ಟದಲ್ಲಿನ ಜನರು ಬದಲಾವಣೆ ಬಯಸಿದ್ದಾರೆ. ಈಗ ಪಕ್ಷ ಸೇರುತ್ತಿರುವ ನಾಯಕರು ಕೂಡ ರಾಷ್ಟ್ರೀಯ ನಾಯಕರಲ್ಲ, ಆಯಾ ಕ್ಷೇತ್ರಗಳಲ್ಲಿ ತಳಮಟ್ಟದಲ್ಲಿ ಶ್ರಮಿಸುವ ನಾಯಕರು. ಇವರಿಂದಲೇ ನಾವು ದೊಡ್ಡ ನಾಯಕರಾಗಿ ಬೆಳೆಯಲು ಸಾಧ್ಯ. ಇವರಿಲ್ಲದಿದ್ದರೆ ನಾವು ನಾಯಕರಾಗಿ ಬೆಳೆಯಲು ಸಾಧ್ಯವಿಲ್ಲ. ತಮ್ಮಣ್ಣ ಅವರ ಪಕ್ಷ ಸೇರ್ಪಡೆಯಿಂದ ಚಿಕ್ಕಮಗಳೂರು ಜಿಲ್ಲೆಗೆ ಶುಭಕಾಲ ಆರಂಭವಾಗುತ್ತಿದೆ. ನಾನು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಕೋರುತ್ತೇನೆ. ಚಿಕ್ಕಮಗಳೂರಿನಲ್ಲಿ ದತ್ತಪೀಠ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಆದರೆ ಈಗ ಜನರಿಗೆ ಬದುಕು ಕಟ್ಟಿಕೊಳ್ಳಬೇಕಿದೆ. ಬಿಜೆಪಿ ಕೇವಲ ಭಾವನೆ ಮೇಲೆ ರಾಜಕೀಯ ಮಾಡುತ್ತಿದ್ದು, ನಾವು ಬದುಕಿನ ವಿಚಾರವಾಗಿ ರಾಜಕೀಯ ಮಾಡುತ್ತೇವೆ. ಜನ ಕೂಡ ಅವರ ಹೊಟ್ಟೆಪಾಡು ಏನು ಎಂದು ಪ್ರಶ್ನಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಭಾವನಾತ್ಮಕ ವಿಚಾರವಾಗಿ ಅಶಾಂತಿ ಹೆಚ್ಚಾಗಿರುವ ಪರಿಣಾಮ ಅಲ್ಲಿ ಯಾರೊಬ್ಬರೂ ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ ಬಿಜೆಪಿ ನಾಯಕ ಆಯನೂರು ಮಂಜುನಾಥ್ ಅವರೇ ಈ ವಿಚಾರವನ್ನು ಒಪ್ಪಿಕೊಂಡು ಮುಂದೆ ಇದನ್ನು ಬದಲಿಸಬೇಕು ಎಂಬ ಸಂದೇಶವನ್ನು ತಮ್ಮ ಪೋಸ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಇದು ಕೂಡ ಜನ ಭಾವನೆಗಿಂತ ಬದುಕಿನ ಬಗ್ಗೆ ಆಲೋಚಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next