Advertisement

Congress ಟಿಕೆಟ್‌; ಹದಿನಾಲ್ಕು ಕ್ಷೇತ್ರಗಳಲ್ಲಿ ಕುಟುಂಬ ಪಾಲು!: ಕಾರ್ಯಕರ್ತರಲ್ಲಿ ಅಸಮಾಧಾನ

12:48 AM Mar 22, 2024 | Team Udayavani |

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14ರಲ್ಲಿ ಕಾಂಗ್ರೆಸ್‌ ತನ್ನ ನಾಯಕರ ಕುಟುಂಬದ ಕುಡಿಗಳಿಗೇ ಟಿಕೆಟ್‌ ನೀಡಿದೆ! ಪಕ್ಷದ ಈ ನಿರ್ಧಾರ ಒಂದೆಡೆ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾದರೆ, ಇನ್ಮೊಂದೆಡೆ ವಿಪಕ್ಷ ಗಳಿಗೂ ಆಹಾರವಾಗಿದೆ.

Advertisement

ಈ ಸಲದ ಚುನಾವಣೆಯ ಉಸ್ತುವಾರಿಯನ್ನು ಅಯಾ ಜಿಲ್ಲಾ ಉಸ್ತುವಾರಿಗಳಿಗೆ ವಹಿಸಿದ್ದೇ ಈ ರೀತಿಯ ಟಿಕೆಟ್‌ ಹಂಚಿಕೆ ಅಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ಸಲ ಗೆಲ್ಲಲೇಬೇಕು, ನಿಮ್ಮ ಸ್ಥಾನ ಉಳಿದುಕೊಳ್ಳಬೇಕಾದರೆ ಗೆದ್ದ ಅಭ್ಯರ್ಥಿಯೊಂದಿಗೆ ಬರಬೇಕು, ಯಾರನ್ನೋ ಗೆಲ್ಲಿಸುವ ಬದಲು “ನಮ್ಮ’ವರನ್ನೇ ಗೆಲ್ಲಿಸಿಕೊಂಡು ಬರೋಣ ಎಂಬ ದೂರದೃಷ್ಟಿಯ ಲೆಕ್ಕಾಚಾರ ಹಾಕಿದ ಉಸ್ತುವಾರಿ ಸಚಿವರು, ಪ್ರಮುಖ ನಾಯಕರು ತಮ್ಮ ವಂಶಕುಡಿಗಳಿಗೆ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬರುಗಿ: ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುತ್ತಿದ್ದ ಕಲಬರುಗಿ ಕ್ಷೇತ್ರದ ಟಿಕೆಟ್‌ ಈ ಸಲ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಪಾಲಾಗಿದೆ. ಖರ್ಗೆ ಪುತ್ರ ಪ್ರಿಯಾಂಕ್‌ ಖರ್ಗೆ ಸಂಪುಟ ದರ್ಜೆ ಸಚಿವರಾಗಿದ್ದಾರೆ.

ಬೀದರ್‌: ಭಾಲ್ಕಿ ಶಾಸಕ, ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಸಾಗರ್‌ ಖಂಡ್ರೆಗೆ ಇದೇ ಮೊದಲ ಬಾರಿಗೆ ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ ದೊರೆತಿದೆ. ಭಾಲ್ಕಿ ಕ್ಷೇತ್ರವನ್ನು ಈಶ್ವರ ಖಂಡ್ರೆ ತಂದೆ ಭೀಮಣ್ಣ ಖಂಡ್ರೆ ಹಲವು ಬಾರಿ ಪ್ರತಿನಿಧಿಸಿದ್ದರು. ಈ ಸಲದ ಲೋಕಸಭಾ ಚುನಾವಣೆ ಟಿಕೆಟ್‌ ಈಶ್ವರ ಖಂಡ್ರೆ ಪುತ್ರನಿಗೆ ಸಿಗುವ ಮೂಲಕ 3ನೇ ತಲೆಮಾರಿನ ರಾಜಕೀಯಕ್ಕೆ ಬುನಾದಿ ಹಾಕಿದಂತಾಗಿದೆ.

ಕೊಪ್ಪಳ: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಸಹೋದರ ರಾಜಶೇಖರ ಹಿಟ್ನಾಳ್‌ಗೆ ಟಿಕೆಟ್‌ ದೊರೆತಿದ್ದು, ಇಲ್ಲೂ ಸಹೋದರರೇ ಮೇಲುಗೈ ಸಾಧಿಸಿದ್ದಾರೆ. ಅಣ್ಣ ಲೋಕಸಭೆಗೆ, ತಮ್ಮ ವಿಧಾನಸಭೆಯಲ್ಲಿ ಎಂಬಂತಾಗಿದೆ.

Advertisement

ಬೆಂಗಳೂರು ದಕ್ಷಿಣ: ಬೆಂಗಳೂರಿನ ಪ್ರಭಾವಿ ನಾಯಕ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ಇದೇ ಮೊದಲ ಬಾರಿಗೆ ಲೋಕ ಸಭಾ ಚುನಾವಣೆ ಎದುರಿಸುತ್ತಿದ್ದಾರೆ. ವಿಧಾನಸಭಾ ಚುನಾ ವಣೆಯಲ್ಲಿ ಜಯನಗರದಿಂದ ಸೋತಿದ್ದರು. ತಂದೆ ಕ್ಯಾಬಿನೆಟ್‌ ದರ್ಜೆ ಸಚಿವರು, ಪುತ್ರಿ ಲೋಕಸಭಾ ಅಭ್ಯರ್ಥಿ.

ಬೆಂಗಳೂರು ಕೇಂದ್ರ: ವಿಧಾನ ಪರಿಷತ್‌- ರಾಜ್ಯಸಭೆ ಎರಡೂ ಸದನಗಳಲ್ಲೂ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸದಸ್ಯರಾಗಿದ್ದ ಕೇಂದ್ರದ ಮಾಜಿ ಸಚಿವ ರೆಹಮಾನ್‌ ಖಾನ್‌ ಪುತ್ರ ಎಐಸಿಸಿ ಕಾರ್ಯದರ್ಶಿಯಾಗಿರುವ ಮನ್ಸೂರ್‌ ಅಲಿಖಾನ್‌ ಕೇಂದ್ರದ ಅಭ್ಯರ್ಥಿ.

ದಾವಣಗೆರೆ
ಮಾವ ಶಾಮನೂರು ಶಿವಶಂಕರಪ್ಪ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ಪತಿ ಎಸ್‌.ಎಸ್‌.ಮಲ್ಲಿಕಾರ್ಜುನ ತೋಟಗಾರಿಕೆ ಸಚಿವರು. ಈಗ ಸಚಿವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್‌ ಲೋಕಸಭಾ ಅಭ್ಯರ್ಥಿ.
ಬಾಗಲಕೋಟೆ: ಎಪಿಎಂಸಿ ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಬಾಗಲಕೋಟೆ ಕ್ಷೇತ್ರದ ಅಭ್ಯರ್ಥಿ.

ಬೆಳಗಾವಿ: ಬೆಳಗಾವಿ ಜಿಲ್ಲೆಯ ಪ್ರಭಾವಿ ರಾಜಕಾರಣಿ ಸಚಿವ ಲಕ್ಷಿ$¾à ಹೆಬ್ಟಾಳ್ಕರ್‌ ಅವರು ಪುತ್ರ ಮೃಣಾಲ್‌ಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿವರ ಸಹೋದರ ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ತಿನ ಸದಸ್ಯರೂ ಆಗಿದ್ದಾರೆ.

ಚಿಕ್ಕೋಡಿ: ಒಂದೇ ಜಿಲ್ಲೆಯ ಇಬ್ಬರು ಸಚಿವರು ಪುತ್ರ ಹಾಗೂ ಪುತ್ರಿಗೆ ಟಿಕೆಟ್‌ ಕೊಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಚಿಕ್ಕೋಡಿಯಿಂದ ಸಚಿವ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಸತೀಶ್‌ ಜಾರಕಿಹೊಳಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಸತೀಶ್‌ ಜಾರಕಿಹೊಳಿ ಸಹೋದರರಾದ ರಮೇಶ್‌ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಹಾಗೂ ಲಖನ್‌ ಜಾರಕಿಹೊಳಿ ಎಲ್ಲರೂ ಶಾಸಕರಾಗಿದ್ದಾರೆ.
ಬೆಂಗಳೂರು ಉತ್ತರ:ವಿಧಾನಸಭೆಯ ಮಾಜಿ ಸ್ಪೀಕರ್‌ ಆಗಿದ್ದ ಎಂ.ವಿ.ವೆಂಕಟಪ್ಪ ಪುತ್ರ ಪ್ರೊ| ರಾಜೀವ್‌ ಗೌಡ ಇದೇ ಮೊದಲ ಬಾರಿಗೆ ಉತ್ತರ ಕ್ಷೇತ್ರದ ಅಭ್ಯರ್ಥಿ.

ಹಾವೇರಿ: ಶಿರಹಟ್ಟಿಯ ಮಾಜಿ ಶಾಸಕ ಎಸ್‌.ಎಸ್‌. ಗಡ್ಡದೇವರ ಮಠ ಅವರ ಪುತ್ರ ಆನಂದ ಗಡ್ಡದೇವರ ಮಠ ಹಾವೇರಿ ಕ್ಷೇತ್ರದ ಅಭ್ಯರ್ಥಿ. ಇದು ಇವರಿಗೆ ಮೊದಲ ಚುನಾವಣೆ.

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಪುತ್ರಿ, ನಟ ಶಿವರಾಜಕುಮಾರ್‌ ಪತ್ನಿ ಹಾಗೂ ಸಚಿವ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜಕುಮಾರ್‌ 2ನೇ ಬಾರಿಗೆ ಲೋಕಸಮರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 2014 ರಲ್ಲಿ ಜೆಡಿಎಸ್‌ನಿಂದ ಗೀತಾ ಸ್ಪರ್ಧಿಸಿ ಸೋತಿದ್ದರು. ಈ ಸಲ ಕಾಂಗ್ರೆಸ್‌ ಅಭ್ಯರ್ಥಿ.

ಹಾಸನ: ಹಾಸನದ ರಾಜಕಾರಣದಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಬಿಟ್ಟು ಹೋಗಿರುವ ಮಾಜಿ ಸಚಿವ ಹಾಗೂ ಮಾಜಿ ಸಂಸದ ದಿ| ಪುಟ್ಟಸ್ವಾಮಿ ಗೌಡರ ಮೊಮ್ಮಗ ಶ್ರೇಯಸ್‌ ಪಟೇಲ್‌ ಈಗ ಲೋಕಸಭಾ ಅಭ್ಯರ್ಥಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊಳೆನರಸೀಪುರದಿಂದ ಸ್ಪರ್ಧಿಸಿ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ವಿರುದ್ಧ ಕೆಲವೇ ಸಾವಿರ ಮತಗಳ ಅಂತರದಿಂದ ಸೋತಿದ್ದರು.

ಬೆಂಗಳೂರು ಗ್ರಾಮಾಂತರ
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಹಾಲಿ ಸಂಸದರು. ಮತ್ತೆ ಈಗ ಅವರೇ ಬೆಂಗಳೂರು ಗ್ರಾಮಾಂತರದ ಅಭ್ಯರ್ಥಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿದ್ದ ಏಕೈಕ ಕ್ಷೇತ್ರವೆಂದರೆ ಬೆಂ.ಗ್ರಾಮಾಂತರ. ಹಾಲಿ ಸದಸ್ಯರಾಗಿದ್ದರಿಂದ ಸಹಜವಾಗಿಯೇ ಅವರಿಗೆ ಟಿಕೆಟ್‌ ದೊರೆತಿದೆ.

ಎಂ.ಎನ್‌.ಗುರುಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next