Advertisement

ಜಾತಿ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ: ಆರೋಪ

03:08 PM Apr 20, 2018 | Team Udayavani |

ಚಿತ್ರದುರ್ಗ: ಕಾಂಗ್ರೆಸ್‌ ಪಕ್ಷ ಹೆಸರಿಗೆ ಮಾತ್ರ ಜಾತ್ಯಾತೀತ ಪಕ್ಷವಾಗಿದೆ. ಆದರೆ ಟಿಕೆಟ್‌ ಹಂಚಿಕೆಯಲ್ಲಿ ಜಾತಿ ಲೆಕ್ಕಾಚಾರ ಮಾಡಿ ಟಿಕೆಟ್‌ ನೀಡಲಾಗಿದೆ. ಇದು ಯಾವ ಸೀಮೆಯ ಜಾತ್ಯಾತೀತ ಪಕ್ಷ ಎಂದು ಮುಸ್ಲಿಂ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಿ ಫಾರಂ ಪಡೆದು ಗುರುವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಆಗಮಿಸಿದ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಅವರಿಗೆ ಈ ಘಟನೆಯಿಂದ ತೀವ್ರ ಮುಜುಗರ ಉಂಟಾಯಿತು. ಸಂಸದರು, ಜಿಲ್ಲಾ ಸಮಿತಿ ಎದುರೇ ಮುಸ್ಲಿಂ ಮುಖಂಡರು, ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಮನಬಂದಂತೆ ಕೂಗಾಡಿದರು. ಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹೈಕಮಾಂಡ್‌ ಯಾರ ವಿಶ್ವಾಸ ಪಡೆಯದೇ ಅಪರಿಚಿತ, ಹೊರಗಿನ ವ್ಯಕ್ತಿಗೆ ಟಿಕೆಟ್‌ ನೀಡಿರುವುದರ ವಿರುದ್ಧ ಕಾಂಗ್ರೆಸ್‌
ಮುಖಂಡರು, ಕಾರ್ಯಕರ್ತರು ತೀವ್ರ ಸಮಾಧಾನ ವ್ಯಕ್ತ ಪಡಿಸಿದರು. 

ಕಾಂಗ್ರೆಸ್‌ ಪಕ್ಷದಲ್ಲಿ 30-40 ವರ್ಷ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ಪಕ್ಷ ಟಿಕೆಟ್‌ ನೀಡಿರುವುದು ಒಂದು ಕಡೆಯಾದರೆ, ಟಿಕೆಟ್‌ ಗಿಟ್ಟಿಸಿಕೊಂಡಿರ ಅಭ್ಯರ್ಥಿಯು ಯಾರನ್ನು ಸಂಪರ್ಕಿಸಿಲ್ಲ. ಬೆಂಗಳೂರಿಗೆ ಹೋಗಿ ಬಿ ಫಾರಂ ತಂದಿದ್ದಾರೆ. ಈ ರೀತಿಯ ಧೋರಣೆ ಸರಿಯಲ್ಲ ಎಂದು ಕಾರ್ಯಕರ್ತರು ಮತ್ತು ಮುಖಂಡರಿಂದ ಅಸಮಾಧಾನದ ಮಾತುಗಳು ಹೊರಬಂದವು. ಜಿಲ್ಲೆಯಲ್ಲಿ ಅಲ್ಪ ಸಂಖ್ಯಾತ ಮುಖಂಡರನ್ನು ಕಡೆಗಣಿಸಲಾಗಿದೆ. ಕಾಂಗ್ರೆಸ್‌ನಲ್ಲಿ ಕೂರಿಸಿ ಮಾತನಾಡುವ ಸಂಸ್ಕೃತಿಯೇ ಇಲ್ಲವಾಗಿದೆ.

ಬರೀ ಹಣದ ರಾಜಕಾರಣ ಜಾಸ್ತಿಯಾಗಿದೆ. ಬೇರೆ ಸಮುದಾಯದ ಮುಖಂಡರನ್ನು ಉದ್ದೇಶ ಪೂರಕವಾಗಿಯೆ ತುಳಿಯುತ್ತಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿ ಗಲಾಟೆ ಆರಂಭಿಸಿದರು. ಇಡೀ ಕಚೇರಿಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದ್ದರಿಂದ ಒಬ್ಬರ ಮಾತು ಒಬ್ಬರಿಗೆ ಕೇಳುತ್ತಿರಲಿಲ್ಲ. ಹಿರಿ, ಕಿರಿಯ ತಲೆಯಾಳುಗಳು ಸುಮ್ನಿನಿರುವಂತೆ ಮಾಡುತ್ತಿದ್ದ ಮನವಿಗಳಿಗೂ ಯಾರೂ ಕ್ಯಾರೇ ಎನ್ನಲಿಲ್ಲ. ಇದು ಪಕ್ಷಕ್ಕೆ ಹಿನ್ನಡೆಯಾಗಲಿದೆ. ಪ್ರತಿಷ್ಠೆಯ ಚುನಾವಣೆ. ಆ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಲು ತಯಾರಿದ್ದೇವು. ಆದರೆ ಉತ್ತಮ ಅಭ್ಯರ್ಥಿಯನ್ನೇ ಹಾಕಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಿಂದೆ ಮೈಸೂರು ಮೂಲದ ಉದ್ಯಮಿ ರಘು ಆಚಾರ್‌ ಪರಿಷತ್‌ ಸ್ಥಾನಕ್ಕೆ ಟಿಕೆಟ್‌ ನೀಡಿ ಸ್ಥಳೀಯರನ್ನು ಕಡೆಗಣಿಸಲಾಗಿತ್ತು. ಈಗ ಅದೇ ಕೆಲಸವಾಗಿದೆ. ಹೊರಗಿನವರಿಗೆ ಟಿಕೆಟ್‌ ನೀಡುವ ಮೂಲಕ ಮತ್ತೂಮ್ಮೆ ಕಾಂಗ್ರೆಸ್‌ ಪಕ್ಷದ ಸೋಲಿಗೆ ಕಾರಣವಾಗಲಿದೆ ಎಂದರು.

ಕಾಂಗ್ರೆಸ್‌ ಕಾರ್ಯಕರ್ತರು, ಯುವ ಮುಖಂಡರ ಮಧ್ಯ ಮಾತಿನ ಚಕಮಕಿ ಕೂಡಾ ನಡೆಯಿತು. ಒಬ್ಬರಿಗೊಬ್ಬರು ಹಿಗ್ಗಾಮಗ್ಗಾ ತರಾಟೆ ತೆಗೆದುಕೊಂಡರು. ಈ ಎಲ್ಲ ಗಲಾಟೆ ನೋಡಿಕೊಂಡು ದಿವ್ಯ ಮೌನಕ್ಕೆ ಶರಣಾಗಿದ್ದ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ಒಂದೇ ಒಂದು ಮಾತನಾಡಲಿಲ್ಲ. ಸಂಸದ ಬಿ.ಎನ್‌.ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಫಾತ್ಯರಾಜನ್‌, ತಾಜ್‌ ಪೀರ್‌, ಸರ್ದಾರ್‌ ಪಾಷ, ಬಿ.ಟಿ.ಜಗದೀಶ್‌, ಆರ್‌. ಕೆ.ನಾಯ್ಡು ಮತ್ತಿತರ ಮುಖಂಡರು ಗಲಾಟೆ ನೋಡಿಕೊಂಡು ಮೂಕ ಪ್ರೇಕ್ಷಕರಾಗಿದ್ದರು.

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಈಗಾಗಲೇ ಭಿನ್ನ ಮತ ಶುರುವಾಗಿದ್ದು ಪ್ರಭಾವಿ ಮುಖಂಡರು, ಟಿಕೆಟ್‌ ಆಕಾಂಕ್ಷಿಗಳು
ಬೇರೆ ಬೇರೆ ಕಡೆ ಗೌಪ್ಯ ಸಭೆ ಮಾಡುತ್ತಿದ್ದಾರೆ. ಮುಖಂಡರ ನಡೆ ಒಂದು ಕಡೆಯಾದರೆ, ಕಾರ್ಯಕರ್ತರ ನಡೆ ಮತ್ತೂಂದಾಗಿದೆ. 

ಜಿಲ್ಲಾ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಜಬ್ಟಾರ್‌ ಮಾತನಾಡಲು ಮುಂದಾಗುತ್ತಿದ್ದಂತೆ ಕಾರ್ಯಕರ್ತರು ಕೂಗಾಡಿ, ಮುಸ್ಲಿಂರಿಗೆ ನ್ಯಾಯ ಬೇಕು. ನೀವು ಯಾವುದೇ ರೀತಿಯಲ್ಲಿ ಮಾತನಾಡಬಾರದು, ಕಾಂಗ್ರೆಸ್‌ ಪಕ್ಷಕ್ಕೆ ಮುಸ್ಲಿಂರ ಮತಗಳು ಬೇಕಿವೆ. ಆದರೆ ಮುಸ್ಲಿಂರು ಅಭ್ಯರ್ಥಿಗಳಾಗುವಂತಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದರೂ ಒಂದೂ ಕಡೆ ಟಿಕೆಟ್‌ ನೀಡಿಲ್ಲ ಎಂದು ದೂರಿದರು. ಟಿಕೆಟ್‌ ಪಡೆದ ಅಭ್ಯರ್ಥಿ ಯಾವೊಬ್ಬ ಮುಖಂಡರನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ. ಮುಖಂಡರ ಮನೆಗಳಿಗೆ ಭೇಟಿ ನೀಡಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next