Advertisement

ಜಾರ್ಜ್‌ಗೆ “ಕೈ”ಬಲ: ರಾಜೀನಾಮೆ ಅಗತ್ಯವಿಲ್ಲ ಎಂದ ಸಿಎಂ 

07:34 AM Oct 28, 2017 | Team Udayavani |

ಬೆಂಗಳೂರು: ಡಿವೈಎಸ್‌ಪಿ ಎಂ.ಕೆ. ಗಣಪತಿ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆ ಪಡೆವ ಅಗತ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಪ್ರತಿಪಾದಿಸಿದ್ದಾರೆ. ಅಲ್ಲದೆ ಜಾರ್ಜ್‌ ಅವರ ಬೆನ್ನಿಗೆ ನಿಲ್ಲುವಂತೆ ಪಕ್ಷ ಮತ್ತು ಸಚಿವರಿಗೆ ಸೂಚನೆಯನ್ನೂ ನೀಡಿದ್ದಾರೆ.

Advertisement

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯವರು ಎಂಥದ್ದೇ ಹೋರಾಟ ನಡೆಸಲಿ, ಅದನ್ನು ಎದುರಿ ಸುವ ಶಕ್ತಿ ಕಾಂಗ್ರೆಸ್‌ಗಿದೆ ಎಂದು ಹೇಳಿದ್ದಾರೆ. ಈ ಹಿಂದೆಯೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಸಿಐಡಿ ತನಿಖೆಯಲ್ಲಿ ಕ್ಲೀನ್‌ಚಿಟ್‌ ದೊರೆತಿದ್ದ ರಿಂದ ಮರಳಿ ಸಂಪುಟಕ್ಕೆ ಬಂದಿದ್ದಾರೆ. ಬಿಜೆಪಿಯ ವರು ರಾಜಕೀಯ ಲಾಭಕ್ಕಾಗಿ ಜಾರ್ಜ್‌ ರಾಜೀನಾಮೆ ಕೇಳುತ್ತಿದ್ದು, ಅವರಿಗೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಬಿಐ ಹಾಕಿರುವ ಎಫ್ಐಆರ್‌ ಹೊಸದೇನೂ ಅಲ್ಲ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮ್ಯಾಜಿ  ಸ್ಟ್ರೇಟ್‌ ಕೋರ್ಟ್‌ನ ನಿರ್ದೇಶನದ ಮೇರೆಗೆ ಕುಶಾಲ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್ ಐಆರ್‌ನ ಮುಂದುವರಿದ ಭಾಗದಂತಿದೆ ಎಂದರು.

ಗಣಪತಿ ಅವರ ತಂದೆ ಕುಶಾಲಪ್ಪ ಸುಪ್ರೀಂ ಕೋರ್ಟ್‌ನಲ್ಲಿ ಸಿಐಡಿ ಸಲ್ಲಿಸಿರುವ “ಬಿ’ ರಿಪೋರ್ಟ್‌ ಪ್ರಶ್ನಿಸಿಲ್ಲ. ಸುಪ್ರೀಂಕೋರ್ಟ್‌ ಸಹ ತನ್ನ ತೀರ್ಪಿನಲ್ಲಿ ಜಾರ್ಜ್‌ ಒಳಗೊಂಡಂತೆ ಯಾರ ಹೆಸರನ್ನೂ ಪ್ರಸ್ತಾಪ ಮಾಡಿಲ್ಲ. ಸುಪ್ರೀಂಕೋರ್ಟ್‌ ಸಹ ಸಿಐಡಿಯ ಬಿ ರಿಪೋರ್ಟ್‌ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಜಾರ್ಜ್‌ ಸೇರಿದಂತೆ ಇತರೆ ಪೊಲೀಸ್‌ ಅಧಿಕಾರಿಗಳ ಹೆಸರನ್ನೂ ಉಲ್ಲೇಖೀಸಿಲ್ಲ. ಪ್ರಕರಣದ ಬಗ್ಗೆ ತನಿಖೆಗೆ ಸೂಚಿಸಿದೆಯಷ್ಟೇ. ಹೀಗಾಗಿ, ಇಲ್ಲಿ ರಾಜೀನಾಮೆ ಪಡೆಯುವಂಥ ಪರಿಸ್ಥಿತಿ ಉದ್ಭವಿಸಿಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ 20 ಮಂದಿ ಸಚಿವರು ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದು ಅನಂತಕುಮಾರ್‌ ಹೆಗ್ಡೆ, ರಮೇಶ್‌ ಜಿಗಜಿಣಗಿ ಸೇರಿ ಹಲವರ ವಿರುದ್ಧ ಎಫ್ಐಆರ್‌ ಸಹ ಹಾಕಲಾಗಿದೆ. ಅವರೆಲ್ಲರೂ ರಾಜೀನಾಮೆ ನೀಡಿದ್ದಾರಾ ಎಂದು ಪ್ರಶ್ನಿಸಿದರು. 

ಎಫ್ಐಆರ್‌
ದಾಖಲಾದೊಡನೆಯೇ ರಾಜೀನಾಮೆ ನೀಡಬೇಕು ಎಂದಾದರೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧವೂ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿದಿಲ್ಲವೇ ಎಂದು ತಿರುಗೇಟು ನೀಡಿದರು. 

ಬಿಎಸ್‌ವೈ ವಿರುದ್ಧವೂ ದೂರುಗಳಿವೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧವೂ ವಂಚನೆ ಸೇರಿ ಐಪಿಸಿ ಸೆಕ್ಷನ್‌ 420, 466, 406, 405 ಸೇರಿ ವಿವಿಧ ಸೆಕ್ಷನ್‌ಗಳಡಿ ಆರು ಪ್ರಕರಣಗಳಲ್ಲಿ ಎಫ್ಐಆರ್‌ ಹಾಕಲಾಗಿದೆ. ಅವರು ಜಾರ್ಜ್‌ ರಾಜೀನಾಮೆ ಕೇಳುವುದು ನಾಚೀಕೆಗೇಡು ಎಂದು ಕಿಡಿಕಾರಿದರು. ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ ತೀರ್ಪು ಅಥವಾ ಸಿಬಿಐ ವಿರುದ್ಧ ಮಾತನಾಡುವುದಿಲ್ಲ. ಯಾರನ್ನೂ ಸಮರ್ಥಿಸಿಕೊಳ್ಳುವುದೂ ಇಲ್ಲ. ಕಾನೂನು ವ್ಯಾಪ್ತಿಯಲ್ಲಿ ಜಾರ್ಜ್‌ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

Advertisement

ಎಫ್ಐಆರ್‌ ಎಂಬುದು ಆರೋಪಿಗಳ ಸಾಕ್ಷಿಯ ಪ್ರಮಾಣ ಪತ್ರವಲ್ಲ. ಹಿಂದೆ ಆರೋಪ ಕೇಳಿ ಬಂದಾಗ ಜಾರ್ಜ್‌ ಅವರು ಗೃಹ ಸಚಿವರಾಗಿದ್ದರು. ಇದೀಗ ಅವರು ಗೃಹ ಖಾತೆಯ ಹೊಣೆಗಾರಿಕೆ ಹೊಂದಿಲ್ಲ. ಸಿಬಿಐ ತನಿಖೆ ನಡೆಯುವಾಗ ಸಚಿವ ಸ್ಥಾನದಲ್ಲಿದ್ದರೆ ಪ್ರಭಾವ ಬಳಸಬಹುದು ಎಂಬುದಕ್ಕೂ ಅರ್ಥವಿಲ್ಲ. ಏಕೆಂದರೆ ಸಿಬಿಐ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಒಳಪಡುವ ತನಿಖಾ ಸಂಸ್ಥೆ ಅಲ್ಲ ಎಂದು ತಿಳಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲಕ್ಕೂ ರಾಜಕೀಯ ಬಣ್ಣ ಹಚ್ಚಿ ದುರ್ಲಾಭ
ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಸಿಬಿಐ ಅನ್ನು “ಸಾಧನ’ವಾಗಿ ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ. ಮೇಲ್ನೋಟಕ್ಕೆ ಇದು ಎಲ್ಲರಿಗೂ ಅರ್ಥವಾಗುವ ವಿಚಾರ. ನಾವೂ ಸಹ ಇದನ್ನು ರಾಜಕೀಯವಾಗಿಯೇ ಎದುರಿಸುತ್ತೇವೆ ಎಂದು ಹೇಳಿದರು.

ಸಚಿವರ ಬೆನ್ನಿಗೆ ನಿಲ್ಲಿ
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಎರಡು ಗಂಟೆಗಳ ಕಾಲ ಹಿರಿಯ ಸಚಿವರು ಹಾಗೂ ಕಾನೂನು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಿಜೆಪಿ ಪ್ರಕರಣದಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿರುವುದರಿಂದ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷ ಜಾರ್ಜ್‌ ಬೆನ್ನಿಗೆ ನಿಲ್ಲಬೇಕು. ಯಾವುದೇ ಕಾರಣಕ್ಕೂ ರಾಜೀನಾಮೆ ಪಡೆಯಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ನಂತರ ಸಚಿವರಾದ ರಮೇಶ್‌ಕುಮಾರ್‌, ಡಿ.ಕೆ. ಶಿವಕುಮಾರ್‌, ಎಂ.ಬಿ.ಪಾಟೀಲ್‌, ಟಿ.ಬಿ.ಜಯಚಂದ್ರ, ಎಚ್‌.ಸಿ. ಮಹದೇವಪ್ಪ, ರೋಷನ್‌ಬೇಗ್‌, ರಾಮಲಿಂಗಾರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್‌ ಜತೆಗೂಡಿ ಸುದ್ದಿಗೋಷ್ಠಿ ನಡೆಸಿದರು. ಈ ಮೂಲಕ ಸರ್ಕಾರ ಮತ್ತು ಪಕ್ಷ ಜಾರ್ಜ್‌ ಬೆನ್ನಿಗೆ ನಿಂತಿದೆ. ನಮ್ಮಲ್ಲಿ ಒಗ್ಗಟ್ಟು ಇದೆ ಎಂಬುದನ್ನು ಬಿಂಬಿಸಿದರು. 

ಸಿಬಿಐ ಅಂದ್ರೆ ಚೋರ್‌ ಬಚಾವೋ ಸಂಸ್ಥೆ, ಕಾಂಗ್ರೆಸ್‌ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ ಎಂದು ಹೀಯಾಳಿಸುತ್ತಿದ್ದ ಬಿಜೆಪಿ ಇದೀಗ ಎಲ್ಲದಕ್ಕೂ ಸಿಬಿಐ ಜಪ ಮಾಡುತ್ತಿದೆ. 25 ಸಾವಿರ ಕೋಟಿ ರೂ. ಮೊತ್ತದ ಗಣಿ ಅಕ್ರಮ ಪ್ರಕರಣವನ್ನು ಸಿಬಿಐ ಕ್ಲೋಸ್‌ ಮಾಡಿದೆ. ಬಿಜೆಪಿ ನಾಯಕರಿಗೆಲ್ಲಾ ರಿಲೀಫ್ ಕೊಟ್ಟಿದೆ.
 ●ಸಿದ್ದರಾಮಯ್ಯ, ಮುಖ್ಯಮಂತ್ರಿ 

ಸಿಬಿಐ ಎಫ್ಐಆರ್‌ ಹಾಕಿದ ಮಾತ್ರಕ್ಕೆ ಜಾರ್ಜ್‌ ರಾಜೀನಾಮೆ ನೀಡುವ ಅಗತ್ಯವಿಲ್ಲ ವೆಂಬು ದು ಪಕ್ಷದ ನಿಲುವು ಸಹ. ಸಿಬಿಐ ತನಿಖೆಯಾಗಲಿ ಯಾವುದೇ ಅಭ್ಯಂತರವಿಲ್ಲ. ತನಿಖೆ ನಂತರ ಸತ್ಯಾಸತ್ಯತೆ ಗೊತ್ತಾಗುತ್ತದೆ.
 ●ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ 

ಸಿಬಿಐ ಎಫ್ಐಆರ್‌ ಹಾಕಿದಾಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿಲ್ಲ. ನಾನು ಈ ವಿಚಾರದಲ್ಲಿ ರಾಜಕೀಯ ಬೆರೆಸುವುದಿಲ್ಲ. ತಪ್ಪುಮಾಡಿ ರುವುದಕ್ಕೆ ಸಾಕ್ಷ್ಯ ಸಿಕ್ಕರೆ ರಾಜೀನಾಮೆ ಕೊಡಬೇಕು. 
 ●ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಸಚಿವರಾಗಿ ಮುಂದುವರಿದರೆ ಸಾಕ್ಷಿಗಳ ನಾಶ ಹಾಗೂ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ವಿಚಾರವನ್ನು ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇವೆ. ರಾಜ್ಯಾದ್ಯಂತ ಹೋರಾಟ ನಡೆಸುತ್ತೇವೆ.
 ●ಜಗದೀಶ್‌ ಶೆಟ್ಟರ್‌, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next