ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಮಹಮ್ಮದ್ ಯುಸೂಫ್ ಸವಣೂರ ಅವರನ್ನು ದಿಢೀರ್ ಬದಲಾವಣೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.
ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಯಾಸೀರ್‌ಖಾನ್ ಪಠಾಣಗೆ ಶಿಗ್ಗಾಂವಿ ಟಿಕೆಟ್ ಘೋಷಿಸಲಾಗಿದೆ. ಮಂಗಳವಾರ ರಾತ್ರಿ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಯುಸೂಫ್ ಸವಣೂರ ಅವರನ್ನು ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಇದೀಗ ಯಾಸೀರ್‌ಖಾನ್ ಪಠಾಣ ಅವರನ್ನು ಶಿಗ್ಗಾಂವಿ ಅಭ್ಯರ್ಥಿ ಎಂದು ಘೋಷಿಸಿದೆ.
ಕಾಂಗ್ರೆಸ್ ಮುಖಂಡ ಪಠಾಣ, ರಿಯಲ್ ಎಸ್ಟೇಟ್ ಉದ್ಯಮಿ, ಹೋಟೆಲ್ ಉದ್ಯಮಿಯಾಗಿದ್ದಾರೆ. ಪಠಾಣ ಹೆಸರು ಮೊದಲು ರೇಸ್‌ನಲ್ಲಿತ್ತಾದರೂ ಕೊನೆಯಲ್ಲಿ ಕೈಬಿಡಲಾಗಿತ್ತು. ಇದೀಗ ನಾಮಪತ್ರ ಸಲ್ಲಿಸಲು ಒಂದೇ ದಿನ ಬಾಕಿ ಇರುವಾಗ ದಿಢೀರ್ ಬದಲಾವಣೆ ಮಾಡಿ, ಪಠಾಣ ಹೆಸರು ಅಂತಿಮಗೊಳಿಸಿದೆ.
ಸಿಎಂಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಸ್ಥಳೀಯ 14 ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸದ ಮೊಹ್ಮದ್ ಯೂಸೂಫ್ ಸವಣೂರಗೆ ಟಿಕೆಟ್ ಕೊಟ್ಟಿರುವುದರಿಂದ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್ ನೀಡಿದಂತಾಗಿತ್ತು. ಹೀಗಾಗಿ ಬುಧವಾರ ಬೆಳಗ್ಗಿನಿಂದಲೇ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಕುರಿತು ವದಂತಿ ಹಬ್ಬಿತ್ತು. ರಾತ್ರಿ ವೇಳೆ ಶಿಗ್ಗಾಂವಿ ಕ್ಷೇತ್ರದ ಪಕ್ಕದ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯ ಕಾಂಗ್ರೆಸ್ ಮುಖಂಡನಿಗೆ ಮಣೆ ಹಾಕಿದಂತಾಗಿದೆ.
ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಶಿಗ್ಗಾಂವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಸತತ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಹಿಂದಿನ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಅಜ್ಜಂಫೀರ್ ಖಾದ್ರಿ ಸತತವಾಗಿ ಸೋತಿದ್ದರು. ಹೀಗಾಗಿ ಅಭ್ಯರ್ಥಿ ಬದಲಾವಣೆ ಮಾಡಬೇಕು ಎಂಬ ಚಿಂತನೆ ನಡೆಸಿದ್ದ ಕಾಂಗ್ರೆಸ್ ಹಿಂದು ಅಭ್ಯರ್ಥಿಗೆ ಮಣೆ ಹಾಕಲು ಮುಂದಾಗಿತ್ತು. ಆದರೆ, ಅಖಂಡ ಧಾರವಾಡ ಜಿಲ್ಲೆಯಲ್ಲಿ ಯಾವುದಾದರೂ ಒಂದು ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಪರಿಪಾಟ ಹೊಂದಿರುವ ಕಾಂಗ್ರೆಸ್ಸಿಗೆ ಬೇರ‍್ಯಾವ ಕ್ಷೇತ್ರಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಶಿಗ್ಗಾಂವಿಯಲ್ಲಿ ಮತ್ತೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಅಭ್ಯರ್ಥಿ ಬದಲಾವಣೆಯಿಂದ ಸ್ಥಳೀಯ ಕಾರ್ಯಕರ್ತರಲ್ಲಿ ಗೊಂದಲ ಮೂಡಿದ್ದು, ಬಂಡಾಯ ಸಾಧ್ಯತೆ ಅಲ್ಲಗಳೆಯುವಂತಿಲ್ಲ.