ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆ ಮೂಲಕ ಪುನಶ್ಚೇತನ ಕಂಡುಕೊಳ್ಳುವ ತವಕದಲ್ಲಿರುವ ಕಾಂಗ್ರೆಸ್ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಚುನಾವಣೆ ಘೋಷಣೆ ಯಾಗುವ ಮೊದಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 15 ಜನರ ತಂಡವನ್ನು ಅನ್ಯ ರಾಜ್ಯಗಳಿಂದ ಕರೆತಂದಿದೆ. ಈ ಹಿಂದೆ ಬಿಜೆಪಿ ಪರವಾಗಿ ದೇಶದ ವಿವಿಧ ರಾಜ್ಯಗಳ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಬಂದು ಕ್ಷೇತ್ರಗಳಲ್ಲಿ ನೆಲೆ ನಿಂತು ಚುನಾವಣೆ ನಡೆಸುತ್ತಿದ್ದರು. ಚುನಾ ವಣೆಗಾಗಿಯೇತಿಂಗಳು, 15 ದಿನಗಳ ಕಾಲ ಮನೆ ಬಿಟ್ಟುಬಂದು ಕೆಲಸ ಮಾಡುವ ವಿಸ್ತಾರಕರ ತಂಡ ಬಿಜೆಪಿಯಲ್ಲಿತ್ತು.
ಈಗ ಕಾಂಗ್ರೆಸ್ ಕೂಡ ಇಂಥದ್ದೇ ಪ್ರಯೋಗಕ್ಕೆ ಮುಂದಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 15 ಮಂದಿ ಕಾಂಗ್ರೆಸ್ ಕಾರ್ಯಕರ್ತರು ದೇಶದ ವಿವಿಧ ರಾಜ್ಯಗಳಾದ ಪಂಜಾಬ್, ಛತ್ತೀಸ್‌ಘಡ, ರಾಜಸ್ಥಾನ, ದೆಹಲಿ, ಹರಿಯಾಣ ಮತ್ತಿತರೆಡೆಗಳಿಂದ ಬಂದು ನೆಲೆಸಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ಈ ಪಡೆ ಬಂದಿದ್ದು, ಮೊದಲ ಹಂತದಲ್ಲಿ ಬೂತ್‌ಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದೆ. ಸ್ಥಳೀಯ ಮುಖಂಡರ ಬಂಡವಾಳ ಬಯಲು: ಚುನಾವಣೆ ಉದ್ದೇಶದಿಂದಲೇ ಮೂರು ವರ್ಷಗಳಿಂದ ಬೂತ್ ಮಟ್ಟ ದಲ್ಲಿ ಕಾರ್ಯಕರ್ತರ ಪಡೆ ಕಟ್ಟಬೇಕು.
ಬೂತ್ ಕಮಿಟಿ ರಚನೆ ಮಾಡಬೇಕು ಎಂಬ ಸೂಚನೆಯನ್ನು ಕಾಂಗ್ರೆಸ್ ಹೈಕ ಮಾಂಡ್ ನೀಡಿತ್ತು. ಇದು ಎಷ್ಟರ ಮಟ್ಟಿಗೆ ಪಾಲನೆಯಾಗಿದೆ ಎನ್ನುವುದನ್ನು ಹೊರ ರಾಜ್ಯಗಳಿಂದ ಬಂದಿರುವ ತಂಡ ಖುದ್ದು ಬೂತ್‌ಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದೆ. ಎಷ್ಟು ಬೂತ್ ಕಮಿಟಿ ರಚನೆಯಾಗಿದೆ. ರಚನೆಯಾಗದಿರುವ ಬೂತ್‌ಗಳೆಷ್ಟು ಎಂಬಿತ್ಯಾದಿ ಮಾಹಿತಿಯನ್ನು ಅಂಕಿ-ಸಂಖ್ಯೆ ಸಮೇತ ಪ್ರತಿ ದಿನ ಹೈಕಮಾಂಡ್‌ಗೆ ರವಾನಿಸುತ್ತಿದೆ. ಇದ ರಿಂದ ಇಷ್ಟು ದಿನ ಪಕ್ಷದ ಕೆಲಸವನ್ನು ಸರಿಯಾಗಿ ನಿಭಾಯಿ ಸದ ಸ್ಥಳೀಯ ಮುಖಂಡರಿಗೆ ಪೀಕಲಾಟ ಶುರುವಾಗಿದೆ.
ದಿನಕ್ಕೊಂದು ಮೀಟಿಂಗ್, ವಾರಕ್ಕೊಂದು ಟಾಸ್ಕ್: ಹೊರ ರಾಜ್ಯಗಳಿಂದ ಬಂದಿರುವ ತಂಡ ಮೊದಲ ದಿನದಿಂದಲೇ ಕೆಲಸ ಆರಂಭಿಸಿದ್ದು, ಆಯಾ ಕ್ಷೇತ್ರಗಳ ವ್ಯಾಪ್ತಿಯ ಬೂತ್‌ಗಳಿಗೆ ತೆರಳಿ ಅಲ್ಲಿನ ಕಾರ್ಯಕರ್ತರು, ಜನಸಾಮಾನ್ಯರನ್ನು ಮಾತನಾ ಡಿಸಿ ಅಭಿಪ್ರಾಯ ಸಂಗ್ರಹಿಸುವುದು, ಆಡಳಿತ ಪಕ್ಷದ ಕುರಿತು ಜನರಲ್ಲಿರುವ ಅಸಮಾಧಾನವನ್ನು ಗ್ರಹಿಸುವುದು, ಈ ಅಸಮಾಧಾನ ಕಾಂಗ್ರೆಸ್‌ಗೆ ಮತವಾಗಿ ಪರಿವರ್ತನೆಯಾಗಲು ಏನಾಗಬೇಕು ಎನ್ನುವ ಅಂಶಗಳನ್ನು ಪಟ್ಟಿ ಮಾಡುತ್ತಿದೆ. ಈ ಮಾಹಿತಿಗಳನ್ನು ಆಯಾ ದಿನವೇ ಸಂಜೆ ಹೈಕಮಾಂಡ್‌ಗೆ ತಲುಪಿಸಲಿದೆ.
ಖುದ್ದು ರಾಹುಲ್ ಗಾಂಧಿ ಅವರಿಗೆ ಈ ಮಾಹಿತಿ ರವಾನೆಯಾಗುತ್ತಿದ್ದು, ಅವರ ಆಪ್ತರ ತಂಡ ಈ ಕಾರ್ಯಾಚರಣೆ ಮಾಡುತ್ತಿದೆ. ಪ್ರತಿ ದಿನ ಸಂಜೆ ಸಭೆ ನಡೆಸಿ ಆಯಾ ದಿನದ ಆಗು-ಹೋಗುಗಳನ್ನು ವರಿಷ್ಠರಿಗೆ ತಲುಪಿಸಲಾಗುತ್ತಿದೆ. ಚುನಾವಣೆ ಗೆಲುವಿನ ದೃಷ್ಟಿಯಿಂದ ಈ ತಂಡಕ್ಕೆ ಪ್ರತಿ ವಾರ ಒಂದೊಂದು ಟಾಸ್ಕ್ ನೀಡಲಾಗುತ್ತಿದೆ. ಅದರನ್ವಯ ವಾರ-ವಾರವೂ ಕಾರ್ಯ ವೈಖರಿ ಬದಲಾಗುತ್ತಲೇ ಇರುತ್ತದೆ.
ಕಾಲಚಕ್ರ ಬದಲಾಗಲೇಬೇಕು
“ಉದಯವಾಣಿ”ಗೆ ಮಾತಿಗೆ ಸಿಕ್ಕ ಈ ತಂಡದ ಛತ್ತೀಸ್‌ಗಡ ಹಾಗೂ ರಾಜಸ್ಥಾನದ ಯುವ ಕಾಂಗ್ರೆಸ್ ಮುಖಂಡರು, ಮೇಲೆ ಹೋದದ್ದು ಕೆಳಗೆ ಬರಲೇಬೇಕು. ಇದು ಕಾಲದ ನಿಯಮ. ಅದರಂತೆ ಕಾಂಗ್ರೆಸ್ ಮತ್ತೆ ಪುಟಿದೇಳಲು ಕೆಲಸ ಮಾಡುತ್ತಿದೆ. ಕರ್ನಾಟಕ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡುತ್ತಿದ್ದೇವೆ. ಇಂಥದ್ದೇ ಪ್ರಯೋಗವನ್ನು ಹಿಮಾಚಲ ಪ್ರದೇಶದಲ್ಲಿ ಮಾಡಿದ್ದು ಅಲ್ಲಿ ಉತ್ತಮ ಫಲಿತಾಂಶ ಸಿಕ್ಕಿದೆ ಎಂಬ ಮಾಹಿತಿ ಹಂಚಿಕೊಂಡರು.
~ತಿಪ್ಪೇಸ್ವಾಮಿ ನಾಕೀಕೆರೆ