Advertisement

Lok Sabha Elections; ಕಾಂಗ್ರೆಸ್‌ ಸೋತ್ರೆ ಖರ್ಗೆ ತಲೆದಂಡ: ಅಮಿತ್‌ ಶಾ

09:44 PM May 27, 2024 | Team Udayavani |

ಕುಷಿನಗರ್‌: ಲೋಕಸಭೆ ಚುನಾವಣೆ ಫ‌ಲಿತಾಂಶ ಜೂನ್‌ 4ರಂದು ಹೊರಬಿದ್ದ ಬಳಿಕ ಐಎನ್‌ಡಿಐಎ ಒಕ್ಕೂಟದ ಸೋಲಿಗೆ ರಾಹುಲ್‌ ಗಾಂಧಿಯನ್ನಾಗಲಿ, ಪ್ರಿಯಾಂಕಾ ಗಾಂಧಿ ವಾದ್ರಾರನ್ನಾಗಲಿ ಕಾಂಗ್ರೆಸ್‌ ಹೊಣೆ ಮಾಡುವುದಿಲ್ಲ. ಬದಲಿಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊಣೆ ಮಾಡಲಾಗುತ್ತದೆ ಮತ್ತು ಅವರು ಎಐಸಿಸಿ ಅಧ್ಯಕ್ಷ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ನಾಯಕ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

Advertisement

ಜತೆಗೆ ಇವಿಎಂಗಳಿಂದಾಗಿ ಸೋತೆವು ಎಂಬುದಾಗಿಯೂ ರಾಹುಲ್‌ ಗಾಂಧಿ ಬೆಂಬಲಿಗರು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ಕುಷಿನಗರ, ಬಲಿಯಾ ಮತ್ತು ಚಂದೌಲಿಯ ಚುನಾವಣ ರ್ಯಾಲಿಗಳಲ್ಲಿ ಮಾತನಾಡಿದ ಅಮಿತ್‌ ಶಾ, 5 ಹಂತಗಳ ಮತದಾನದ ವಿವರ ನನ್ನ ಬಳಿ ಇದೆ. ಮೋದಿ ಅವರು ಈಗಾಗಲೇ 310 ಸ್ಥಾನಗಳನ್ನು ಗೆದ್ದಿದ್ದಾರೆ. ರಾಹುಲ್‌ ಪಕ್ಷಕ್ಕೆ 40 ಸ್ಥಾನಗಳು ಕೂಡ ಸಿಗುವುದಿಲ್ಲ. ಅಖೀಲೇಶ್‌ ಯಾದವ್‌ಗೆ ನಾಲ್ಕೇ ಸ್ಥಾನಗಳು ಸಿಗಲಿವೆ ಎಂದರು.

ಹಾಲಿ ಚುನಾವಣೆಯ ಫ‌ಲಿತಾಂಶದಿಂದ “ಸಹೋದರ ಮತ್ತು ಸಹೋದರಿ’ (ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ) ಅವರಿಗೆ ಏನೂ ಆಗುವುದಿಲ್ಲ. ಕಾಂಗ್ರೆಸ್‌ನಲ್ಲಿ ಸೋಲಿನ ಹೊಣೆಯನ್ನು ಖರ್ಗೆಯವರ ತಲೆಗೆ ಕಟ್ಟಲಾಗುತ್ತದೆ. ಹೀಗಾಗಿ ಜೂ. 4ರ ಬಳಿಕ ಅವರ ತಲೆದಂಡ ಖಚಿತ ಎಂದರು.

ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಮೋದಿಯವರ ವಿರುದ್ಧ 25 ಪೈಸೆಯಷ್ಟೂ ಭ್ರಷ್ಟಾಚಾರದ ಆರೋಪಗಳಿಲ್ಲ. ಆದರೆ ಇಬ್ಬರು ರಾಜಕುಮಾರರು (ರಾಹುಲ್‌ ಗಾಂಧಿ ಮತ್ತು ಅಖೀಲೇಶ್‌ ಯಾದವ್‌) 12 ಲಕ್ಷ ಕೋಟಿ ರೂ. ಭ್ರಷ್ಟಾಚಾರ ಮಾಡಿದ್ದಾರೆಂದು ಶಾ ಆರೋಪಿಸಿದರು.

Advertisement

ಒಂದು ಜಿಲ್ಲೆ, ಒಂದು ಮಾಫಿಯಾ!
ಸಹರಾ ಗ್ರೂಪ್‌ ಹಗರಣವನ್ನು ಉಲ್ಲೇಖೀಸಿ ಟೀಕೆ ಮಾಡಿದ ಅಮಿತ್‌ ಶಾ, ಅಖೀಲೇಶ್‌ ಪಕ್ಷವು ಸಹರಾ ಗ್ರೂಪ್‌ನ ನೆರವಿನಿಂದಲೇ ನಡೆಯುತ್ತಿತ್ತು. ಎಸ್‌ಪಿ ಆಡಳಿತದಲ್ಲೇ ಸಹರಾ ಹಗರಣ ನಡೆಯಿತು ಎಂದು ವಾಗ್ಧಾಳಿ ನಡೆಸಿದರು. ಎಸ್‌ಪಿ ಆಡಳಿತದಲ್ಲಿ “ಒಂದು ಜಿಲ್ಲೆ, ಒಂದು ಮಾಫಿಯಾ’ ಇತ್ತು. ಈಗ ಕೇಂದ್ರ ಸರಕಾರದ ವತಿಯಿಂದ “ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆ ಇದ್ದು, ಎಲ್ಲರಿಗೂ ಲಾಭವಾಗುತ್ತಿದೆ ಎಂದರು.

ಪಾಕ್‌ಗೆ ಖಡಕ್‌ ಉತ್ತರ
ಪಾಕಿಸ್ಥಾನಕ್ಕೆ ಖಡಕ್‌ ಉತ್ತರ ಯಾರು ನೀಡುತ್ತಾರೆ? ನಿಮ್ಮನ್ನು ಕೋವಿಡ್‌, ನಕ್ಸಲ್‌ವಾದ ಮತ್ತು ಭಯೋತ್ಪಾದನೆಯಿಂದ ಪಾರು ಮಾಡಿದ್ದು ಯಾರು? ದೇಶದ 60 ಕೋಟಿ ಜನರ ಕಲ್ಯಾಣ ಮಾಡಿದ್ದು ಯಾರು? ಇದೆಲ್ಲವನ್ನೂ ಮೋದಿ ಒಬ್ಬರೇ ಮಾಡಿದ್ದು ಎಂದು ಹೇಳಿದ ಅಮಿತ್‌ ಶಾ, ವಿಪಕ್ಷ ಗೆದ್ದರೆ ಐದು ವರ್ಷಗಳಿಗೆ ಐವರು ಪ್ರಧಾನಿಗಳಾಗಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next