Advertisement

Congress ಲೋಕ ಸೋಲು: 20+ ಸಚಿವರ ಖಾತೆ ಬದಲಾವಣೆಗೆ ಆಗ್ರಹ

12:50 AM Jul 13, 2024 | Team Udayavani |

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನ ಸೋಲಿನ “ಶೋಧ’ ಕಾರ್ಯ ಎರಡನೇ ದಿನವಾದ ಶುಕ್ರವಾರವೂ ಮುಂದುವರಿದಿದೆ. ವಿವಿಧ ಭಾಗಗಳ ಪಕ್ಷದ ಮುಖಂಡರು ಕೆಲವು ಸಚಿವರ ಕಾರ್ಯವೈಖರಿ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿ ದ್ದಾರೆ. ಕೆಲಸ ಮಾಡದೆ ಹಾಯಾಗಿರುವ 20ಕ್ಕೂ ಹೆಚ್ಚು ಸಚಿವರ ಖಾತೆಗಳನ್ನು ಬದಲಾಯಿಸಬೇಕು. ಆಸಕ್ತಿ ಇಲ್ಲದವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಆ ಮೂಲಕ ಸಂಪುಟ ಪುನಾರಚನೆ ನಡೆಸು ವಂತೆ ಆಗ್ರಹಿಸಿದ್ದಾರೆ.

Advertisement

ಕೆಲವು ಸಚಿವರು ಪ್ರಮುಖ ಖಾತೆಗಳನ್ನು ಹೊಂದಿದ್ದರೂ ಅವರ ಕಾರ್ಯನಿರ್ವಹಣೆ ಮಾತ್ರ ಅತ್ಯಂತ ಕಳಪೆಯಾಗಿದೆ. ಕೊನೆಯ ಪಕ್ಷ ಜಿಲ್ಲಾ ಸಚಿವರಾಗಿಯೂ ಕಾರ್ಯವೈಖರಿ ತೃಪ್ತಿಕರವಾಗಿಲ್ಲ.

ವರ್ಷ ತುಂಬಿದರೂ ಇಲಾಖೆ ಬಗ್ಗೆಯೇ ತಿಳಿದುಕೊಂಡಿಲ್ಲ. ಲೋಕಸಭಾ ಚುನಾವಣೆಯಲ್ಲೂ ಅವರ ಕೊಡುಗೆ ಶೂನ್ಯ. ಕೇವಲ ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹವರ ಖಾತೆ ಅದಲು-ಬದಲು ಮಾಡುವ ಅಗತ್ಯ ಇದೆ ಎಂದು ಸಮಿತಿ ಮುಂದೆ ಹಲವು ನಾಯಕರು ಪ್ರತಿಪಾದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಮಾರು 20ಕ್ಕೂ ಅಧಿಕ ಸಚಿವರ ಕಾರ್ಯವೈಖರಿಯ ಬಗ್ಗೆ ವಿವಿಧ ಭಾಗಗಳ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರ ಮೌಲ್ಯಮಾಪನದ ವೇಳೆ ಇದನ್ನು ಪರಿಗಣಿಸಬೇಕು. ಖಾತೆ ಬದಲಾವಣೆ ಮಾಡಿದರೆ ಮಾತ್ರ ಅವರು ಚುರುಕಾಗಿ ಕಾರ್ಯನಿರ್ವಹಿಸಬಲ್ಲರು. ಪಕ್ಷದ ಸ್ಥಳೀಯ ಕಾರ್ಯಕರ್ತರ ಕುಂದುಕೊರತೆಗಳನ್ನು ಆಲಿಸಬೇಕು. ಇದರಿಂದ ಪಕ್ಷಕ್ಕೆ ಹೊಸ ಹುರುಪು ಸಿಗಲಿದ್ದು, ಅದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅನುಕೂಲ ಆಗಲಿದೆ ಎಂದು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಕುಟುಂಬದ ಕುಡಿಗಳಿಗೆ ಟಿಕೆಟ್‌ ಹಿನ್ನಡೆಗೆ ಕಾರಣ
ಲೋಕಸಭಾ ಚುನಾವಣೆಯಲ್ಲಿ “ಕುಟುಂಬದ ಕುಡಿ’ಗಳಿಗೆ ಟಿಕೆಟ್‌ ನೀಡಲಾಯಿತು. ಮತ್ತೊಂದೆಡೆ ವರ್ಷ ಕಳೆದರೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರು, ನಿರ್ದೇ ಶಕರು- ಸದಸ್ಯರ ನೇಮಕ ಮಾಡಲಿಲ್ಲ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಿಸಲಾಯಿತು. ಅದರಲ್ಲಿ ಶಾಸಕರಿಗೆ ಆದ್ಯತೆ ನೀಡಲಾಯಿತು, ಕಾರ್ಯಕರ್ತರು ಕಡೆಗಣಿಸಲ್ಪಟ್ಟರು. ಇದು ನಿರೀಕ್ಷಿತ ಗೆಲುವು ಸಾಧಿಸದಿರಲು ಪ್ರಮುಖ ಪಾತ್ರ ವಹಿಸಿತು ಎಂದು ಕೆಪಿಸಿಸಿ ಪದಾಧಿಕಾರಿಗಳು ಸಮಿತಿ ಗಮನಸೆಳೆದರು ಎಂದು ಮೂಲಗಳು ತಿಳಿಸಿವೆ.

Advertisement

ಎರಡು ಪ್ರಬಲ ಸಮುದಾಯ ಗಳನ್ನು ಪ್ರತಿನಿಧಿಸುವ ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು ಜನ ಒಪ್ಪಿಕೊಂಡರು. ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿತು ಎಂದೂ ಸಮಿತಿ ಮುಂದೆ ಅಭಿಪ್ರಾಯಗಳನ್ನು ಮಂಡಿಸಿರುವುದಾಗಿ ತಿಳಿದು ಬಂದಿದೆ.

ಒಕ್ಕಲಿಗ ಸಿಎಂ ಆಗಲಿಲ್ಲಎಂಬ ಅಸಮಾಧಾನ
“ಒಕ್ಕಲಿಗ ಸಿಎಂ ಆಗಲಿಲ್ಲ’ ಎಂಬ ಅಸಮಾಧಾನ ಹಾಗೂ ಅದಕ್ಕೆ ಪೂರಕವಾಗಿ ಮತ್ತೂಂದು ಬಣದಿಂದ ಚುನಾವಣ ಪ್ರಚಾರದ ವಿವಿಧ ವೇದಿಕೆಗಳಲ್ಲಿ ತೂರಿಬಂದ ಹೇಳಿಕೆಗಳು ದಕ್ಷಿಣ ಕರ್ನಾಟಕ ವಿಶೇಷವಾಗಿ ಹಳೆಯ ಮೈಸೂರು ಭಾಗದಲ್ಲಿನ ಸೋಲಿಗೆ ಪ್ರಮುಖ ಕಾರಣ ಎಂದು ಕೆಲವು ಶಾಸಕರು ಹಾಗೂ ಪದಾಧಿಕಾರಿಗಳು ಸತ್ಯಶೋಧನ ಸಮಿತಿಗೆ ತಿಳಿಸಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರಿದ್ದಾರೆ. ಆ ಸಮುದಾಯದ ನಾಯಕರನ್ನು ಸಿಎಂ ಮಾಡಲಿಲ್ಲ ಎಂಬ ಬೇಸರ ಒಂದೆಡೆ ಇದೆ. ಇದರ ಬೆನ್ನಲ್ಲೇ ಚುನಾವಣೆ ಸಂದರ್ಭದಲ್ಲಿ ವಿವಿಧ ವೇದಿಕೆಗಳಲ್ಲಿ ಕೆಲ ನಾಯಕರು ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಹೇಳಿಕೆ ನೀಡಿದರು. ಈ ಮಧ್ಯೆ ಬಿಜೆಪಿ-ಜೆಡಿಎಸ್‌ ಮಿತ್ರಪಕ್ಷಗಳು ಎಚ್‌.ಡಿ. ಕುಮಾರಸ್ವಾಮಿ ಗೆದ್ದರೆ ಕೇಂದ್ರ ಸಚಿವರಾಗುತ್ತಾರೆ ಎಂಬುದನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾದರು. ಇದೆಲ್ಲವೂ ಮೈಸೂರು, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಮತ್ತಿತರ ಕಡೆಗಳಲ್ಲಿ ಪರಿಣಾಮ ಬೀರಿತು ಎಂದು ಪ್ರತಿಪಾದಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಪ್ರಮುಖರೊಂದಿಗೆ ಸಮಿತಿ ಸಭೆ
ಶುಕ್ರವಾರ ನಡೆದ ಇಡೀ ದಿನ ಕೆಪಿಸಿಸಿ ಪದಾಧಿಕಾರಿಗಳು, ಲೋಕಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, 2023ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಅಭ್ಯರ್ಥಿಗಳು, ನಿಗಮ-ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಸಮಿತಿಯು ಸಭೆ ನಡೆಸಿತು. ಈ ಪೈಕಿ 2023ರ ವಿಧಾನಸಭಾ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಮತ್ತು ಮುಂಚೂಣಿ ಘಟಕಗಳ ಪದಾಧಿಕಾರಿಗಳು ತಂಡಗಳಾಗಿ ಅಭಿಪ್ರಾಯ ನೀಡಿದ್ದಾರೆ. ಉಳಿದಂತೆ ಒಬ್ಬೊಬ್ಬರನ್ನಾಗಿ ಕರೆದು ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next