ಮುದ್ದೇಬಿಹಾಳ: ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಉಚಿತ ಯೋಜನೆಗಳು ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಜಾರಿಗೊಳಿಸಿರುವ ಉಚಿತ ಯೋಜನೆಗಳ ಕಾಪಿ ಆಗಿದೆ. ಅವರು ನಮ್ಮಿಂದ ಕದ್ದ ಮಾಲನ್ನು ಇಟ್ಟುಕೊಂಡು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ, ಖ್ಯಾತ ಹಿರಿಯ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಪುರಸಭೆಯ 18ನೇ ವಾರ್ಡನಲ್ಲಿ ಉಪ ಚುನಾವಣೆ ಹಿನ್ನೆಲೆ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲು ಸೋಮವಾರ ಇಲ್ಲಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ವರ್ಷ ಉಚಿತ ಯೋಜನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 5 ವರ್ಷದ ಹಿಂದೆಯೂ ಸಿಎಂ ಆಗಿದ್ರು. ಆವಾಗ ಅವರಿಗೆ ನೀರು, ಅಕ್ಕಿ, ವಿದ್ಯುತ್ ಸಮಸ್ಯೆ ಇರುವುದು ಗೊತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು ಉಚಿತ ಯೋಜನೆ 5 ವರ್ಷದ ಹಿಂದೆ ಜಾರಿಗೆ ಏಕೆ ತರಲಿಲ್ಲ. ಚುನಾವಣೆಗೋಸ್ಕರ ಇದನ್ನು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಆಮ್ ಆದ್ಮಿ ಪಕ್ಷ ದೆಹಲಿ, ಪಂಜಾಬನಲ್ಲಿ ಪಾರದರ್ಶಕ ಆಡಳಿತವನ್ನು ಯಶಸ್ವಿಯಾಗಿ ನೀಡುತ್ತಿದೆ. ಜಾತಿ, ಕೋಮು, ಕುಟುಂಬ ರಾಜಕಾರಣ ಹೆಚ್ಚಾಗುತ್ತಿರುವ ಮತ್ತು ಆರ್ಥಿಕವಾಗಿ ಭದ್ರರಾಗಿರುವ ಕುಟುಂಬ, ಪಕ್ಷಗಳ ಜೊತೆಗೆ ಈ ದಿನಗಳಲ್ಲಿ ಜನಸಾಮಾನ್ಯರ ಪಕ್ಷವಾಗಿರುವ ಆಪ್ ಹೋರಾಟಕ್ಕಿಳಿಯಬೇಕಾಗಿದೆ. ಸಾಮಾನ್ಯ ಜನರನ್ನು ಕಣಕ್ಕಿಳಿಸಿ ಸಾಮಾನ್ಯರ ರೀತಿಯಲ್ಲಿ ಕೆಲಸ ಮಾಡಿ ಗೆಲ್ಲಬೇಕು ಅನ್ನೋದು ನಮ್ಮ ಮನೋಭಾವ. ಆದರೆ ಇಂದಿನ ಸ್ಥಿತಿಯಲ್ಲಿ ಇದು ಕಷ್ಟವಾಗಿದೆ ಎಂದರು.
ಈಚೆಗೆ ನಡೆದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೆವು. ಆದರೆ ಗೆಲ್ಲುವುದಕ್ಕಾಗಿ ಅಲ್ಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದಕ್ಕಾಗಿ. ಅದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಈಗ ಖಾತೆ ತೆಗೆಯಬೇಕು ಅನ್ನೋ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳ ಮರು ಚುನಾವಣೆಯಲ್ಲಿ ಮೈಸೂರು ಜಿಲ್ಲೆ ನಂಜನಗೂಡು, ತುಮಕೂರು ಜಿಲ್ಲೆ ಶಿರಾ ತಾಲೂಕು, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮತ್ತು ಮಂಗಳೂರಿನಲ್ಲಿ ಹೀಗೆ 4 ಕಡೆ ಅಭ್ಯರ್ಥಿ ನಿಲ್ಲಿಸಿದ್ದೇವೆ. ನಮ್ಮದು ಸಿಕ್ಕಾಪಟ್ಟೆ ಹಣ ಖರ್ಚು ಮಾಡಿ ಚುನಾವಣೆ ನಡೆಸುವ ಪಕ್ಷವಲ್ಲ. ಎಲ್ಲ ಅನುಕೂಲ ಹೊಂದಿರುವ ರಾಜಕೀಯ ಪಕ್ಷಗಳು, ವ್ಯಕ್ತಿಗಳೊಂದಿಗೆ ಹೋರಾಡಬೇಕಿದೆ. ಸಿರಾ ಮತ್ತು ಮುದ್ದೇಬಿಹಾಳದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಂಡು ಬಂದಿದೆ ಎಂದರು.
28 ರಾಷ್ಟ್ರೀಯ ಪಕ್ಷಗಳು ಬಿಜೆಪಿ ಎದುರು ಸೆಡ್ಡು ಹೊಡೆದು ನಿಂತಿವೆ. ಆಪ್ ಕೂಡಾ ಇವರ ಜೊತೆಗಿದೆ. ಇದು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತ. ಸ್ಥಳೀಯ ಸಂಸ್ಥೆ, ಬಿಬಿಪಿಎಂಪಿ, ಮುಂಬರುವ ತಾಪಂ, ಜಿಪಂ ಮತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ನಾವು ಸ್ವತಂತ್ರ ಶಕ್ತಿಯ ಮೇಲೆ ಸ್ಪರ್ಧಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಅಭ್ಯರ್ಥಿ ನೂರಹ್ಮದ ಶಿವಣಗಿ ವಕೀಲರು, ಪಕ್ಷದ ಪದಾಧಿಕಾರಿಗಳು ಇದ್ದರು.