ಪಣಜಿ : ಮುಖ್ಯಮಂತ್ರಿ ಮನೋಹರ್ ಪಾರೀಕರ್ ಅವರು ಚಿಕಿತ್ಸೆಗಾಗಿ ದಿಲ್ಲಿಯ ಏಮ್ಸ್‌ಗೆ ಸೇರಿರುವ ನಡುವೆಯೇ ಕಾಂಗ್ರೆಸ್ ಪಕ್ಷ ತನ್ನ ಹದಿನಾಲ್ಕು ಶಾಸಕರ ಬಲದೊಂದಿಗೆ ತಾನು ಗೋವೆಯಲ್ಲಿ ಸರಕಾರ ರಚಿಸುವುದಾಗಿ ಇಂದು ಸೋಮವಾರ ರಾಜಭವನದಲ್ಲಿ ರಾಜ್ಯಪಾಲರಿಗೆ ತನ್ನ ಪತ್ರವನ್ನು ಸಲ್ಲಿಸಿದೆ.
ಹಾಗಿದ್ದರೂ ರಾಜ್ಯಪಾಲರು ಮತ್ತು ಕಾಂಗ್ರೆಸ್ ಪಕ್ಷದ ಶಾಸಕರ ನಡುವೆ ಈ ಬಗ್ಗೆ ಯಾವುದೇ ಸಭೆ ನಡೆದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಹದಿನಾರು ಶಾಸಕರು ಇದ್ದಾರೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ನಿನ್ನೆ ಭಾನುವಾರ ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸ್ಥಾಪಿಸುವುದಕ್ಕೆ ಅವಕಾಶ ನೀಡಬೇಕೆಂದು ಕೋರಿದೆ.
ಗೋವೆಯಲ್ಲಿ ಬಿಜೆಪಿ ಹಿಂಬದಿ ಬಾಗಿಲ ಮೂಲಕ ರಾಷ್ಟ್ರಪತಿ ಆಳ್ವಿಕೆ ಹೇರುವ ಸಂಚನ್ನು ನಡೆಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ರಾಜ್ಯಪಾಲೆ ಡಾ. ಮೃದಲಾ ಸಿನ್ಹಾ ಅವರಿಗೆ ಮುನ್ಸೂಚನೆ ನೀಡಿರುವುದಾಗಿ ಕಾಂಗ್ರೆಸ್ ಪಕ್ಷ ನಿನ್ನೆ ಭಾನುವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗೋವೆಯಲ್ಲಿ ಸ್ಥಿರ ಸರಕಾರ ಸ್ಥಾಪಿಸುವ ಅವಕಾಶವನ್ನು ತನಗೆ ಒದಗಿಸಬೇಕೆಂದು ಕೋರಿರುವ ಕಾಂಗ್ರೆಸ್, ರಾಜ್ಯದ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಅವರು ತನ್ನ ಅನಾರೋಗ್ಯದ ಅನುಪಸ್ಥಿತಿಯಲ್ಲಿ ಅಧಿಕಾರವನ್ನು ತನ್ನ ಕ್ಯಾಬಿನೆಟ್ ಸಹೋದ್ಯೋಗಿಗಳಿಗೆ ನೀಡದಿರುವುದನ್ನು ಟೀಕಿಸಿದೆ. ಈ ಮೂಲಕ ಬಿಜೆಪಿ ಮತ್ತು ಅದರ ಮಿತ್ರ ಪಕ್ಷದಲ್ಲಿನ ಅಧಿಕಾರದಾಹ ಬಹಿರಂಗವಾದಂತಾಗಿದೆ ಎಂದು ಹೇಳಿದೆ.