ಸಿಕಾರ್ : ‘ನಾವು ಮಾಡಿರುವ ಸರ್ಜಿಕಲ್ ಸ್ಟ್ರೈಕ್ ಅನ್ನು ಮೊದಲಲ್ಲಿ ವಿರೋಧಿಸಿದ್ದ ಕಾಂಗ್ರೆಸ್ ಪಕ್ಷ, ಈಗ ‘ಮೀ ಟೂ’ ಎನ್ನುತ್ತಾ ತಾನೂ ತನ್ನ ಕಾಲದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆ ಎಂದು ಸುಳ್ಳು ಸುಳ್ಳೇ ಕೊಚ್ಚಿಕೊಳ್ಳುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ಮಾಡಿದ ಚುನಾವಣಾ ಪ್ರಚಾರ ಭಾಷಣದಲ್ಲಿ ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷವನ್ನು ಲೇವಡಿ ಮಾಡಿದರು.
“ಪೆಹಲೇ ಉಪೇಕ್ಷಾ, ಫಿರ್ ವಿರೋಧ್, ಅಬ್ ಮೀ ಟೂ’ (ಮೊದಲು ತಿರಸ್ಕಾರ, ಅನಂತರ ವಿರೋಧ, ಈಗ ಮೀ ಟೂ) ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಜಾಯಮಾನವನ್ನು ಟೀಕಿಸಿದರು.
‘ನಾವು ಗಡಿ ನಿಯಂತ್ರಣ ರೇಖೆ ದಾಟಿ ಮಾಡಿದ್ದ ಸರ್ಜಿಕಲ್ ಸ್ಟ್ರಕನ್ನು ಮೊದಲು ತೀವ್ರವಾಗಿ ವಿರೋಧಿಸಿದ್ದ ಕಾಂಗ್ರೆಸ್ ಅನಂತರ ತಾನೂ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್‌ನಡೆಸಿದ್ದೆ ಎಂದು ಹೇಳಿಕೊಂಡಿತ್ತು. ಅದೇ ಪಕ್ಷದ ಮತ್ತೋರ್ವ ನಾಯಕರು (ವಕ್ತಾರ ರಾಜೀವ್ ಶುಕ್ಲಾ) ನಾವು ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು ಎಂದು ಹೇಳುತ್ತಿದ್ದಾರೆ. ಈ ಲೋಕಸಭಾ ಚುನಾವಣೆ ಮುಗಿವ ಹೊತ್ತಿಗೆ ಕಾಂಗ್ರೆಸ್ ಮಾಡಿತ್ನೆನ್ನಲಾಗಿರುವ ಸರ್ಜಿಕಲ್ ಸ್ಟ್ರೈಕ್ ಸಂಖ್ಯೆ 600 ದಾಟಬಹುದು’ ಎಂದು ಮೋದಿ ಹೇಳಿದರು.
‘ಕಾಂಗ್ರೆಸ್ ತನ್ನ ಆಡಳಿತೆಯಲ್ಲಿ ಕೇವಲ ಪೇಪರ್ ನಲ್ಲೇ ಸರ್ಜಿಕಲ್ ಮಾಡಿರಬಹುದು; ಆದರಿಂದ ಯಾರಿಗೆ ಲಾಭವಾಗಿದೆ ? ದೇಶ ಮತ್ತು ದೇಶದ ಭದ್ರತೆಗಂತೂ ಅಲ್ಲ’ ಎಂದು ಮೋದಿ ಕಟಕಿಯಾಡಿದರು.
ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಅವರು ನಿನ್ನೆ ಗುರುವಾರ ಯುಪಿ ಸರಕಾರ ಆರು ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು ಎಂದು ಹೇಳಿ ಈ ಕೆಳಗಿನ ವಿವರ ನೀಡಿದ್ದರು : 1. ಭಟ್ಟಾಲ್ ಸೆಕ್ಟರ್‌ನ ಪೂಂಚ್ – 2008 ಜೂನ್ 19, 2. ನೀಲಂ ನದೀ ಕಣಿವೆಯ ಶಾರದಾ ಸೆಕ್ಟರ್ – ಆಗಸ್ಟ್ 30, ಸೆ.1, 2011; 3. ಸಾವನ್ ಪತ್ರಾ ಚೆಕ್ ಪೋಸ್ಟ್ – ಜನವರಿ 6, 2013, 4. ನಝಪೀರ್ ಸೆಕ್ಟರ್ – ಜು.27-28, 2013, 5. ನೀಲಂ ಕಣಿವೆ – ಆಗಸ್ಟ್ 6, 2013 ಮತ್ತು 6. 2013ರ ಡಿ.23ರಂದು (ಸ್ಥಳ ಪ್ರಕಟಿಸಿಲ್ಲ).