ಹೊಸದಿಲ್ಲಿ : ಸಿಕ್ಕಿಂ ಗಡಿಯಲ್ಲಿನ ಡೋಕ್ ಲಾ ಪ್ರದೇಶದಲ್ಲಿ ಭಾರತ – ಚೀನ ಸೇನೆಗಳು ಕಳೆದ ಮೂರು ವಾರಗಳಿಂದ ಜಿದ್ದಿನಿಂದ ಮುಖಾಮುಖೀಯಾಗಿದ್ದು ಅದಿನ್ನೂ ಮುಂದುವರಿದಿರುವ ನಡುವೆಯೇ ಕಳೆದ ಜುಲೈ 8ರಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತದಲ್ಲಿನ ಚೀನ ರಾಯಭಾರಿ ಲುವೋ ಝಾವೋಹುಯಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ನಿಜವೇ ಎಂಬ ಪ್ರಶ್ನೆ ಮಾಧ್ಯಮಗಳಲ್ಲೀಗ ಚರ್ಚೆಗೆ ಗ್ರಾಸವಾಗಿದೆ.
ಇಂಥದ್ದೊಂದು ವಿವಾದಾತ್ಮಕ ವರದಿ ಕಳೆದ ವಾರ ಮಾಧ್ಯಮಗಳಲ್ಲಿ ಹರಿದಾದಿತ್ತು.ಅದರಿಂದಾಗಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿತ್ತು.
ಇಂದು ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಅದನ್ನು ಅಲ್ಲಗಳೆದು ಹೇಳಿಕೆ ನೀಡಿದೆ. ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚೀನೀ ರಾಯಭಾರಿಯನ್ನು ಕಂಡದ್ದೂ ಇಲ್ಲ; ಮಾತನಾಡಿಸಿದ್ದೂ ಇಲ್ಲ ಎಂದು ಕಾಂಗ್ರೆಸ್ ಖಡಾಖಂಡಿತವಾಗಿ ಹೇಳಿದೆ
ರಾಹುಲ್ ಗಾಂಧಿ ಅವರು ಕಳೆದ ವಾರ ಮಾಧ್ಯಮ ವರದಿಗಳಲ್ಲಿ “ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂ ಗಡಿಯಲ್ಲಿನ ಚೀನೀ ಅತಿಕ್ರಮಣ, ಭಾರತ ಸೇನೆಯೊಂದಿಗಿನ ಮುಖಾಮುಖೀಯ ಬಗ್ಗೆ ಏಕೆ ಮೌನ ತಳೆದಿದ್ದಾರೆ’ ಎಂದು ಪ್ರಶ್ನಿಸಿದ್ದರು.
ಸಿಕ್ಕಿಂ ಗಡಿ ಸಮೀಪ, ಭೂತಾನ್ ಜಂಕ್ಷನ್ ಪ್ರದೇಶದಲ್ಲಿ, ಚೀನ ರಸ್ತೆಯನ್ನು ನಿರ್ಮಿಸಲು ಮುಂದಾದದ್ದು ವಿವಾದಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ಕಳೆದ ಮೂರು ವಾರಗಳಿಂದ ಸಿಕ್ಕಿಂ ಗಡಿಯಲ್ಲಿ ಡೋಕ್ ಲಾ ಪ್ರದೇಶದಲ್ಲಿ ಉಭಯ ಸೇನೆಗಳ ನಡುವೆ ಉದ್ವಿಗ್ನತೆ ತಲೆದೋರಿತ್ತು. ಡೋಕ್ ಲಾ ಪ್ರದೇಶ ತನ್ನದೆಂದು ಚೀನ ಹೇಳಿಕೊಂಡಿದೆ.
ಭಾರತ ಮತ್ತು ಚೀನ 3,488 ಕಿ.ಮೀ. ಉದ್ದದ ಗಡಿಯನ್ನು ಹಂಚಿಕೊಂಡಿವೆ. ಇದು ಜಮ್ಮು ಕಾಶ್ಮೀರದಿಂದ ಅರುಣಾಚಲ ಪ್ರದೇಶದ ವರೆಗೆ ಚಾಚಿಕೊಂಡಿದೆ. ಇದರಲ್ಲಿ 220 ಕಿ.ಮೀ. ಗಡಿಯು ಸಿಕ್ಕಿಂ ವಲಯದಲ್ಲಿದೆ.