ಹೊಸದಿಲ್ಲಿ: “ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ’ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯು ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ(ಎಂವಿಎ)ಯಲ್ಲಿ ಬಿರುಕು ಮೂಡಿಸುವ ಸುಳಿವು ಸಿಗು ತ್ತಿದ್ದಂತೆಯೇ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ರಂಗ ಪ್ರವೇಶ ಮಾಡಿದ್ದಾರೆ.
ಶಿವಸೇನೆ ಮತ್ತು ಕಾಂಗ್ರೆಸ್ ನಾಯಕತ್ವದೊಂದಿಗೆ ಪವಾರ್ ಸಂಧಾನ ಮಾತುಕತೆ ನಡೆಸಿದ್ದು, ಇನ್ನು ಮುಂದೆ ಸಾವರ್ಕರ್ ಬಗ್ಗೆ ಟೀಕೆ ಮಾಡದಿರಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ರಾಹುಲ್ ನೀಡಿದ್ದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, “ಸಾವರ್ಕರ್ ನಮ್ಮ ಆರಾಧ್ಯ ದೈವ. ಅವರ ಬಗ್ಗೆ ಟೀಕಿಸುವುದನ್ನು ಮುಂದುವರಿಸಿದರೆ ಮೈತ್ರಿ ಕಡಿದು ಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದರು.
ಅಲ್ಲದೇ ಕಾಂಗ್ರೆಸ್ ಆಯೋಜಿಸಿದ್ದ ಔತಣ ಕೂಟವನ್ನೂ ಬಹಿಷ್ಕರಿಸಿದ್ದರು. ಶಿವಸೇನೆ ನಾಯಕ ಸಂಜಯ್ ರಾವತ್ ಅವರೂ ಈ ಕುರಿತು ಎಐಸಿಸಿ ಅಧ್ಯಕ್ಷ ಖರ್ಗೆ ಅವರಲ್ಲಿ ಪ್ರಸ್ತಾವಿಸಿದ್ದರು. ಆಗ ವಿಪಕ್ಷಗಳ ನಾಯಕರು ಕೂಡ “ಇಂಥ ಸ್ಥಿತಿಯಲ್ಲಿ ಸಾವರ್ಕರ್ ವಿಚಾರ ಪ್ರಸ್ತಾವಿಸುವುದು ಸೂಕ್ತವಲ್ಲ. ನಮ್ಮ ಹೋರಾಟ ಪ್ರಧಾನಿ ಮೋದಿ ವಿರುದ್ಧವೋ, ಸಾವರ್ಕರ್ ವಿರುದ್ಧವೋ ಎಂಬುದನ್ನು ನಿರ್ಧರಿಸಬೇಕು’ ಎಂದು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ ಕೂಡ ಸಮ್ಮತಿಸಿತ್ತು.
ಇದೇ ವೇಳೆ ಟ್ವಿಟರ್‌ನಲ್ಲಿ “ಸಾವರ್ಕರ್’ ಕುರಿತು ರಾಹುಲ್ ನೀಡಿದ್ದ ಹೇಳಿಕೆಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಕೆಲವು ಬಳಕೆದಾರರು ಟ್ವೀಟ್ ಮಾಡಿದ್ದಾರೆ.