ಪಣಜಿ: ಪುರಾತನ ಕಟ್ಟಡಗಳು ಮತ್ತು ದೇವಾಲಯಗಳು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಕಾಂಗ್ರೆಸ್ ತನ್ನ ಆಡಳಿತದ ಸಂದರ್ಭದಲ್ಲಿ ದೇವಾಲಯಗಳನ್ನು ನಾಶಮಾಡುವುದನ್ನು ನಿಲ್ಲಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಧೋಗಳ್ ಸಾಯಿನಗರದಲ್ಲಿ ದೇವಸ್ಥಾನದ ನೂತನ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಗೋವಾದಲ್ಲಿ ಪೋರ್ಚುಗೀಸರ ಆಡಳಿತಾವಧಿಯಲ್ಲಿ ಧ್ವಂಸಗೊಳಿಸಿರುವ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡಲು ಮತ್ತು ಪುನಃ ಪ್ರತಿಷ್ಠಾಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ರಾಜ್ಯದ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಅದಕ್ಕಾಗಿ ಪ್ರಸಕ್ತ ಬಜೆಟ್‍ನಲ್ಲಿ 20 ಕೋಟಿ ರೂ. ಮೀಸಲಿಟ್ಟಿದ್ದೇವೆ. ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ನಾವು ತಲುಪಿಸಬೇಕಾಗಿದೆ ಎಂದರು.
ಭಾರತೀಯ ಸಂಸ್ಕೃತಿ, ಪ್ರಾಚೀನ ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ತಲುಪಿಸುವ ಅಗತ್ಯವಿದ್ದು ಪ್ರತಿಯೊಬ್ಬರೂ ಆ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸಾವಂತ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಉಲ್ಲಾಸ ತುಯೇಕರ್, ಅಲೆಕ್ಸ ರೆಜಿನಾಲ್ಡ್ ಲಾರೆನ್ಸ್ , ಮಾಜಿ ಉಪಮುಖ್ಯಮಂತ್ರಿ ಬಾಬು ಕವಳೇಕರ್, ಮಾಜಿ ಸಂಸದ ನರೇಂದ್ರ ಸಾವೈಕರ್ ಮತ್ತಿತರರು ಉಪಸ್ಥಿತರಿದ್ದರು.