ನವದೆಹಲಿ:ಬಿಬಿಸಿಯ ಮುಂಬೈ, ದಿಲ್ಲಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಮುಂದುವರಿದಿದೆ.
ಇದನ್ನೂ ಓದಿ:ಸರ್ಕಾರ ಯೋಜನೆಗಳ ಟೆಂಡರ್ ಮೊತ್ತ ಹೆಚ್ಚಿಸಿಕೊಂಡು ಭ್ರಷ್ಟಾಚಾರ ಮಾಡುತ್ತಿದೆ: ಕಾಂಗ್ರೆಸ್ ಆರೋಪ
ಲಂಡನ್ ಮೂಲದ ಬಿಬಿಸಿ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಬಿಬಿಸಿ ವಿಶ್ವದ ಅತ್ಯಂತ ಭ್ರಷ್ಟ ಸಂಸ್ಥೆಯಾಗಿದೆ. ಅಷ್ಟೇ ಅಲ್ಲ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡಾ ಬಿಬಿಸಿಯನ್ನು ನಿಷೇಧಿಸಿದ್ದರು ಎಂಬುದನ್ನು ಕಾಂಗ್ರೆಸ್ ನೆನಪಿಸಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಪ್ರತಿಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಭಾಟಿಯಾ, ಸರ್ಕಾರಿ ಸಂಸ್ಥೆ ತನ್ನ ಕೆಲಸವನ್ನು ಮಾಡಲು ಅನುಮತಿಸಬೇಕು ಎಂದು ಹೇಳಿದರು. ಯಾವುದೇ ಸಂಸ್ಥೆಯ ವಿರುದ್ಧ ಕ್ರಮದ ಕುರಿತು ಯಾವುದೇ ಸರ್ಕಾರ ಅಥವಾ ಬಾಹ್ಯ ವ್ಯಕ್ತಿಗಳು ಸಮಯ ನಿರ್ಧರಿಸಲು ಸಾಧ್ಯವಿಲ್ಲ. ಪ್ರತಿಪಕ್ಷಗಳು ಇಂತಹ ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು ಎಂದರು.
ಭಾರತದಲ್ಲಿ ಯಾವುದೇ ಸಂಸ್ಥೆ ಅಥವಾ ಕಂಪನಿ ಕಾರ್ಯನಿರ್ವಹಿಸುತ್ತಿದ್ದರೆ ಅದು ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರಬೇಕು. ಕಾಂಗ್ರೆಸ್ ಯಾಕೆ ಯಾವಾಗಲೂ ದೇಶ ವಿರೋಧಿ ಶಕ್ತಿಗಳ ಪರವಾಗಿಯೇ ಧ್ವನಿ ಎತ್ತುತ್ತದೆ ಎಂದು ಭಾಟಿಯಾ ಕಟುವಾಗಿ ಪ್ರಶ್ನಿಸಿದ್ದಾರೆ.