ಬೆಂಗಳೂರು: ನಿಯಮ ಮೀರಿ ಪಾದಯಾತ್ರೆಯಲ್ಲಿ ಪಾಲ್ಗೊಂಡ 30 ಮಂದಿ ನಾಯಕರ ಮೇಲೆ ಎಫ್ಐಆರ್ ದಾಖಲಾಗಿದೆ. ರಾಮನಗರ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯ ಕಾರಣಕರ್ತರ ವಿರುದ್ಧ ಮೊದಲು, ನಂತರ ಉಳಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ದಂಡ ಹಾಕುವ ಪ್ರಕ್ರಿಯೆಯಲ್ಲಿ ಸರ್ಕಾರದ ವಿಳಂಬ ಮಾಡುವುದಿಲ್ಲ. ಇವತ್ತು ಅವರು ಮಾಡಬೇಕಾದ್ದು ಪಾದಯಾತ್ರೆ ಅಲ್ಲ. ನೀರಿನಲ್ಲಿ ಕಿವಿ ಹಿಡಿದು ಕೂತು, ಜನರಲ್ಲಿ ದಮ್ಮಯ್ಯ ತಪ್ಪಾಯ್ತೆಂದು ಕ್ಷಮೆ ಕೇಳಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಬಾರದಿತ್ತು. ನಾವು ಅಸಹಾಯಕರಲ್ಲ, ನಿರ್ಲಕ್ಷ್ಯ ಕೂಡ ಮಾಡಿಲ್ಲ. ಪೊಲೀಸ್ ಪಡೆಯಿದೆ, ತಡೆಯಲು ಆಗುವುದೇ ಇಲ್ಲ ಎಂದಲ್ಲ, ಆದರೆ ಅದು ಮತ್ತೊಂದು ಘಟನೆಗೆ ಕಾರಣ ಆಗಬಾರದು ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
ಇದನ್ನೂ ಓದಿ:ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ: ಜಗದೀಶ ಶೆಟ್ಟರ
ಪಾದಯಾತ್ರೆ ಬೆಂಗಳೂರು ಪ್ರವೇಶ ತಡೆಯವ ವಿಚಾರವಾಗಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ಹತ್ತು ಸಾವಿರ ಪ್ರಕರಣ ಪತ್ತೆಯಾಗುತ್ತಿದೆ. ಶ್ರಮಿಕ ವರ್ಗ ಬಹಳಷ್ಟು ಕಷ್ಟ ಪಡುತ್ತಿದ್ದಾರೆ. ಅವರನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಸೋಂಕು ಪ್ರಕರಣಗಳು ಸುಳ್ಳು ಎಂದು ಹೇಳಿಕೊಂಡು ಓಡಾಡ್ತಿದ್ದಾರೆ, ಹೇಳಲಿ. ಆದರೆ ಸೋಂಕು ಮತ್ತೆ ಉಲ್ಬಣಚಾದರೆ ಕಾಂಗ್ರೆಸ್ ಪಕ್ಷದವರೇ ಕಾರಣ ಎಂದರು
ಡಿಕೆ ಶಿವಕುಮಾರ್ ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಇವರ ಜೀವ ಮುಖ್ಯ, ಆರೋಗ್ಯ ಮುಖ್ಯ. ಟೆಸ್ಟ್ ಮಾಡಲು ಹೋದರೆ ಗದರಿಸಿ ಕಳುಹಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಜ್ವರ ಬಂದಿದೆ. ಯಾವ ರೀತಿಯ ಜ್ವರವೆಂದು ಗೊತ್ತಿಲ್ಲ. ಆರೋಗ್ಯವಾಗಿರಲಿ ಎನ್ನುವುದೇ ನಮ್ಮ ಉದ್ದೇಶ ಎಂದು ಆರಗ ಜ್ಞಾನೇಂದ್ರ ಹೇಳಿದರು.