ಹೊಸದಿಲ್ಲಿ : ರಾಹುಲ್ ಗಾಂಧಿ ಅವರು ಇಂದು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿನ ಪಕ್ಷದ ಪ್ರಧಾನ ಕಾರ್ಯಲಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ತಮ್ಮ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥರು, ಹಿರಿಯ ನಾಯಕರು ಮತ್ತು ಪ್ರದೇಶ್ ಕಾಂಗ್ರೆಸ್ ಸಮಿತಿಯ ಪ್ರತಿನಿಧಿಗಳು ಪಕ್ಷದ ಪ್ರಧಾನ ಕಾರ್ಯಾಲಯದಲ್ಲಿ ಉಪಸ್ಥಿತರಿದ್ದರು.
ರಾಹುಲ್ ಗಾಂಧಿ ಅವರು ನಿರ್ವಚನ ಅಧಿಕಾರಿಯ ಮುಂದೆ ಸಲ್ಲಿಸಲಾಗುವ ನಾಮಪತ್ರಗಳ ಸೆಟ್ಟಿಗೆ ಸಹಿ ಹಾಕಿದರು.
ರಾಹುಲ್ ಗಾಂಧಿ ಅವರ ಪಕ್ಷಾಧ್ಯಕ್ಷ ಹುದ್ದೆಯ ಉಮೇದ್ವಾರಿಕೆಯನ್ನು ಬೆಂಬಲಿಸಲು ಪಕ್ಷದ ಘಟಾನುಘಟಿ ನಾಯಕರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ಆನಂದ್ ಶರ್ಮಾ, ಶೀಲಾ ದೀಕ್ಷಿತ್, ಅಮರೀಂದರ್ ಸಿಂಗ್, ಅಹ್ಮದ್ ಪಟೇಲ್, ಜತಿನ್ ದಾಸ್, ಮೊಹ್ಸಿನಾ ಕಿದ್ವಾಯಿ ಮತ್ತು ಇತರರು 24 ಅಕ್‌ಬರ್ ರಸ್ತೆಯಲ್ಲಿ ಉಪಸ್ಥಿತರಿದ್ದರು.
ಹಾಗಿದ್ದರೂ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉಪಸ್ಥಿತರಿರಲಿಲ್ಲ; ಆದರೆ ರಾಹುಲ್ ಗಾಂಧಿ ಅವರು 10 ಜನಪಥ್ ರಸ್ತೆಗೆ ತೆರಳಿ ತಾಯಿ ಸೋನಿಯಾ ಅವರನ್ನು ಕಂಡು ಮಾತನಾಡಿಸಿ ಬಳಿಕ ಪಕ್ಷದ ಪ್ರಧಾನ ಕಾರ್ಯಾಲಯಕ್ಕೆ ಆಗಮಿಸಿದ್ದರು.
ರಾಹುಲ್ ಅವರನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಠರಾವನ್ನು ಕಾಂಗ್ರೆಸ್ ಕ್ರಿಯಾ ಸಮಿತಿಯು ನ.20ರ ತನ್ನ ಸಭೆಯಲ್ಲಿ ಕೈಗೊಂಡಿತ್ತು.