ಅಹ್ಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಕುದುರೆಗಳಿಗಷ್ಟೇ ಟಿಕೆಟ್ ನೀಡಲು ನಿರ್ಧರಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂಥ ಗ್ಯಾರಂಟಿ ಅಭ್ಯರ್ಥಿಗಳನ್ನು ಸೂಕ್ಷ್ಮವಾಗಿ ಗುರುತಿಸಲೆಂದೇ ಸುಮಾರು 40 ಸೀಕ್ರೆಟ್ ಏಜೆಂಟ್‌ಗಳನ್ನು ನೇಮಿಸಿದ್ದಾರೆಂದು ಮೂಲಗಳು ತಿಳಿಸಿವೆ.
ನ. 12ರೊಳಗೆ ಕಾಂಗ್ರೆಸ್ ಕಣಕ್ಕಿಳಿಯಲಿರುವ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡಬೇಕಿದೆ. ಆದರೆ, ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಆಂಜನೇ ಯನ ಬಾಲದಂತಿರುವುದರಿಂದ ಸೂಕ್ತ ವ್ಯಕ್ತಿಗಳ ಆಯ್ಕೆಗಾಗಿ ರಾಹುಲ್ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ.
ಏನು ಇವರ ಕೆಲಸ?: ಈ ಸೀಕ್ರೆಟ್ ಏಜೆಂಟ್‌ಗಳು ರಾಜ್ಯದ 182 ಕ್ಷೇತ್ರಗಳಲ್ಲಿಯೂ ಗುಪ್ತವಾಗಿ ಕಾರ್ಯಾಚರಣೆಗೆ ಇಳಿದು ಆ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸಿ, ಜನರ ಅಭಿಪ್ರಾಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಯಾವ “ಕೈ’ ನಾಯಕನಿಗೆ ಜನರ ಒಲವಿದೆ ಎಂಬ ವರದಿ ನೀಡಲಿದ್ದಾರೆ. ಇದರ ಆಧಾರದಲ್ಲಿ ಟಿಕೆಟ್ ಆಕಾಂಕ್ಷಿಗಳೆಲ್ಲರ ಸಂದರ್ಶನ ನಡೆಸಲಿರುವ ರಾಹುಲ್ ನೇತೃತ್ವದ ನಾಲ್ವರು ಸದಸ್ಯರುಳ್ಳ ಸಂದರ್ಶನ ಸಮಿತಿ ಅಂತಿಮ ಪಟ್ಟಿ ತಯಾರಿಸಲಿದೆ. ಇದೇ ವರ್ಷ ಪಂಜಾಬ್, ಗೋವಾಗಳಲ್ಲಿ ಇದೇ ತಂತ್ರಗಾರಿಕೆ ಅನುಸರಿಸಿದ್ದ ರಾಹುಲ್, ಆ ರಾಜ್ಯ ಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಬಿಜೆಪಿ ಮಹಾ ಸಂಪರ್ಕ ಅಭಿಯಾನ
ಗುಜರಾತ್ ಚುನಾವಣೆ ವೇಳೆ, ಬಿಜೆಪಿ ಯನ್ನು ಜನರತ್ತ ಹೆಚ್ಚೆಚ್ಚು ಕೊಂಡೊಯ್ಯುವ ದೃಷ್ಟಿಯಿಂದ ನ. 7ರಿಂದ 12 ರವರೆಗೆ ಮಹಾ-ಸಂಪರ್ಕ್ ಅಭಿಯಾನವನ್ನು ಆರಂಭಿಸಲು ನಿರ್ಧರಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ತಮ್ಮ ಸ್ವಕ್ಷೇತ್ರವಾಗಿದ್ದ ನಾರನ್‌ಪುರದಿಂದ ಸಂಪರ್ಕ ಅಭಿಯಾನ ಆರಂಭಿಸುವ ಮೂಲಕ ಇದನ್ನು ಉದ್ಘಾಟಿಸಲಿದ್ದಾರೆ. ಈ ಅಭಿಯಾನದಲ್ಲಿ ರಾಜ್ಯ ನಾಯಕರು 50 ಸಾವಿರ ಬೂತ್ ಮಟ್ಟದ ಮತದಾರರನ್ನು ಭೇಟಿಯಾಗಿ ಬಿಜೆಪಿ ಸರಕಾರದ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸಲಿದ್ದಾರೆ.