Advertisement

SP ಬಳಿಕ AAP ಜತೆಗೂ ಕಾಂಗ್ರೆಸ್‌ ಸೀಟು ಹಂಚಿಕೆ: ಮಾತುಕತೆ ಫ‌ಲಪ್ರದ

12:50 AM Feb 23, 2024 | Team Udayavani |

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ದಿಲ್ಲಿ, ಗುಜರಾತ್‌, ಗೋವಾ, ಹರಿಯಾಣ ಮತ್ತು ಚಂಡೀಗಢದಲ್ಲಿ ಆಪ್‌ ಮತ್ತು ಕಾಂಗ್ರೆಸ್‌ ನಡುವ ಸೀಟು ಹಂಚಿಕೆ ಅಂತಿಮಗೊಂಡಿದೆ. ಈ ಕುರಿತು ಎರಡೂ ಪಕ್ಷಗಳ ನಡುವೆ ಗುರುವಾರ ನಡೆದ ಮಾತುಕತೆ ಫ‌ಲಪ್ರದವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್‌ ಸೀಟು ಹಂಚಿಕೆ ಅಂತಿಮಗೊಂಡ ಬೆನ್ನಲ್ಲೇ ನಡೆದ ಈ ಬೆಳವಣಿಗೆಯು ಇಂಡಿಯಾ ಒಕ್ಕೂಟಕ್ಕೆ ಮತ್ತಷ್ಟು ಬಲ ತಂದಿದೆ.

ಪ್ರಧಾನಿ ಮೋದಿ ಅವರನ್ನು ಮತ್ತು ಆಡಳಿತಾರೂಢ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕೆಂಬ ಸಂಕಲ್ಪದೊಂದಿಗೆ ಇಂಡಿಯ ಮೈತ್ರಿಕೂಟ ರಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವುದನ್ನು ತಡೆಯದಿದ್ದರೆ, ಭವಿಷ್ಟದಲ್ಲಿ ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಸ್ಥಾನ ಹಂಚಿಕೆ ವಿಷಯದಲ್ಲಿ ಮೈತ್ರಿ ಪಕ್ಷಗಳೊಂದಿಗೆ ರಾಜಿಗೆ ಕಾಂಗ್ರೆಸ್‌ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ದಿಲ್ಲಿಯಲ್ಲಿ 4:3 ಫಾರ್ಮುಲಾ

ದಿಲ್ಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿವೆ. ಈ ಪೈಕಿ 4 ಸ್ಥಾನಗಳಲ್ಲಿ ಆಪ್‌ ಸ್ಪರ್ಧಿಸಲಿದೆ. ಉಳಿದ 3 ಸ್ಥಾನಗಳಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ.

Advertisement

ಗುಜರಾತ್‌ನಲ್ಲಿ 2 ಸ್ಥಾನಗಳಲ್ಲಿ ಆಪ್‌ ಸ್ಪರ್ಧೆ

ಗುಜರಾತ್‌ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳ ಪೈಕಿ ಬಾರುಚ್‌ ಮತ್ತು ಭಾವನಗರ-ಎರಡು ಕ್ಷೇತ್ರಗಳಲ್ಲಿ ಆಪ್‌ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಉಳಿದ ಕ್ಷೇತ್ರಗಳನ್ನು ಇಂಡಿಯಾ ಒಕ್ಕೂಟಕ್ಕೆ ಬಿಟ್ಟುಕೊಡಲಾಗಿದೆ. ಇನ್ನು, ಚಂಡೀಗಢದಲ್ಲಿ ಇರುವ ಏಕೈಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ. ಹರಿಯಾಣದ ಏಕೈಕ ಲೋಕಸಭೆ ಕ್ಷೇತ್ರದಲ್ಲಿ ಆಪ್‌ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ.

ಗೋವಾದಲ್ಲಿ 1:1 ಫಾರ್ಮುಲಾ

ಗೋವಾದಲ್ಲಿ ಇರುವ ಎರಡು ಲೋಕಸಭೆ ಕ್ಷೇತ್ರಗಳ ಪೈಕಿ ದಕ್ಷಿಣ ಗೋವಾ ಕ್ಷೇತ್ರದಲ್ಲಿ ಆಪ್‌ ಮತ್ತು ಉತ್ತರ ಗೋವಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ ಎಂದು ಮೂಲಗಳು ತಿಳಿಸಿವೆ.

ಪಂಜಾಬ್‌ನಲ್ಲಿ ಆಪ್‌ ಏಕಾಂಗಿ ಸ್ಪರ್ಧೆ

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಮತ್ತು ಆಪ್‌ ನಡುವೆ ಯಾವುದೇ ಮೈತ್ರಿ ಇಲ್ಲ. ಎಲ್ಲ 13 ಲೋಕಸಭೆ ಕ್ಷೇತ್ರಗಳಲ್ಲಿ ಆಪ್‌ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಪಂಜಾಬ್‌ ಮೇಲೆ ಆಪ್‌ ನಿಯಂತ್ರಣ ಹೊಂದಿದ್ದು, ಲೋಕಸಭೆ ಕ್ಷೇತ್ರಗಳನ್ನು ಬಿಟ್ಟುಕೊಡಲು ಅದು ತಯಾರಿಲ್ಲ ಎಂದು ಮೂಲಗಳು ತಿಳಿಸಿವೆ.

27, 28ರಂದು ಮಹಾರಾಷ್ಟ್ರ ಸೀಟು ಹಂಚಿಕೆ ಅಂತಿಮ ತೀರ್ಮಾನ

“ಮಹಾರಾಷ್ಟ್ರದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳ ನಡುವೆ ಸ್ಥಾನ ಹಂಚಿಕೆ ಕುರಿತು ಮಾತುಕತೆ ಪ್ರಗತಿಯಲ್ಲಿದೆ. ಫೆ. 27 ಮತ್ತು 28ರಂದು ಸಭೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್‌, ಎನ್‌ಸಿಪಿ ಶರದ್‌ ಪವಾರ್‌ ಬಣ, ಶಿವಸೇನೆ ಉದ್ಧವ್‌ ಠಾಕ್ರೆ ಬಣ ಮತ್ತು ಪ್ರಕಾಶ್‌ ಅಂಬೇಡ್ಕರ್‌ ಅವರ ವಂಚಿತ್‌ ಬಹುಜನ ಅಘಾಡಿ ಪಕ್ಷಗಳು ಭಾಗವಹಿಸಲಿವೆ. ಈ ವೇಳೆ ಮಾತುಕತೆ ಅಂತಿಮಗೊಂಡು, ಸ್ಥಾನ ಹಂಚಿಕೆ ಕುರಿತು ಘೋಷಣೆ ಮಾಡಲಾಗುವುದು’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿ ರಮೇಶ್‌ ಚೆನ್ನಿತ್ತಲ ತಿಳಿಸಿದ್ದಾರೆ.

ನಾಡಿದ್ದು ನ್ಯಾಯ್‌ ಯಾತ್ರೆಯಲ್ಲಿ ಅಖಿಲೇಶ್‌ ಭಾಗಿ
ಸೀಟು ಹಂಚಿಕೆ ಮಾತುಕತೆ ಪೂರ್ಣಗೊಂಡ ಬೆನ್ನಲ್ಲೇ ಇದೇ 25ರಂದು ಆಗ್ರಾದಲ್ಲಿ ನಡೆಯುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಘೋಷಿಸಿದ್ದಾರೆ. ಗುರುವಾರ ಎಸ್‌ಪಿ ಕಚೇರಿಗೆ ಭೇಟಿ ನೀಡಿದ ಕಾಂಗ್ರೆಸ್‌ ನಾಯಕರು, ನ್ಯಾಯ್‌ ಯಾತ್ರೆಯ ಆಹ್ವಾನವನ್ನು ನೀಡಿದ್ದಾರೆ. ಇದೇ ವೇಳೆ, ಶನಿವಾರ ಮೊರಾದಾಬಾದ್‌ನಲ್ಲಿ ನಡೆಯುವ ಯಾತ್ರೆಯಲ್ಲಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಪಾಲ್ಗೊಳ್ಳಲಿದ್ದು, ಉ.ಪ್ರದೇಶದಲ್ಲಿ ಯಾತ್ರೆಯ ಉಳಿದ ಅವಧಿಗೆ ರಾಹುಲ್‌ಗೆ ಅವರು ಸಾಥ್‌ ನೀಡಲಿದ್ದಾರೆ ಎಂದು ಪಕ್ಷ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next