ನವದೆಹಲಿ: ದೇಶಾದ್ಯಂತ ನರೇಂದ್ರ ಮೋದಿ ಮತ್ತು ಎನ್.ಡಿ.ಎ. ಪರವಾಗಿ ಇರಬಹುದಾದ ಜನಾಭಿಪ್ರಾಯವನ್ನು ಬದಲಿಸಿ ಮತ್ತೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಸಂಕಲ್ಪವನ್ನು ತೊಟ್ಟಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಇಂದು ನವದೆಹಲಿಯಲ್ಲಿರುವ ಪಕ್ಷದ ಕಛೇರಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.
‘ಕಾಂಗ್ರೆಸ್ ಭರವಸೆಯನ್ನು ಈಡೇರಿಸುತ್ತದೆ’ ಎಂಬ ಶೀರ್ಷಿಕೆಯನ್ನು ಹೊತ್ತಿರುವ ಪ್ರಣಾಳಿಕೆಯನ್ನು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯು.ಪಿ.ಎ. ಮುಖ್ಯಸ್ಥೆಯಾಗಿರುವ ಸೋನಿಯಾ ಗಾಂಧಿ ಮಾಜೀ ಪ್ರಧಾನಿ ಡಾ. ಮನಮೋಹನ್ ಸಿಂಗ್, ಮಾಜೀ ಕೇಂದ್ರ ಸಚಿವ ಪಿ. ಚಿದಂಬರಂ ಸಹಿತ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿರುವ ಹಸ್ತದಲ್ಲಿ ಐದು ಬೆರಳುಗಳಿರುವಂತೆ ಪಕ್ಷದ ಪ್ರಣಾಳಿಕೆಯೂ ಐದು ಮುಖ್ಯ ಅಂಶಗಳನ್ನು ಹೊಂದಿದೆ ಎಂದು ರಾಹುಲ್ ಇದೇ ಸಂದರ್ಭದಲ್ಲಿ ತಿಳಿಸಿದರು. ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ, ಕೃಷಿಕ್ಷೇತ್ರದಲ್ಲಿ ರೈತರಿಗೆ ಒದಗಿರುವ ಸಂಕಷ್ಟಕ್ಕೆ ಪರಿಹಾರ, ಶಿಕ್ಷಣ ವ್ಯವಸ್ಥೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಒತ್ತು ಸೇರಿದಂತೆ ಹಲವಾರು ಅಂಶಗಳನ್ನು ಈ ಪ್ರಣಾಳಿಕೆಯು ಹೊಂದಿದೆ.
ದೇಶಾದ್ಯಂತ ವಿವಿಧ ಕ್ಷೇತ್ರಗಳ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಮಗ್ರವಾಗಿ ಈ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಪಕ್ಷದ ದೃಷ್ಟಿಕೋನವನ್ನು ದೇಶದ ಮತದಾರರಿಗೆ ಮನವರಿಕೆ ಮಾಡಿಕೊಡುವುದು ಹಾಗೂ ಅಭಿವೃದ್ಧಿಶೀಲ ಆರ್ಥಿಕತೆಯನ್ನು ಉತ್ತೇಜಿಸುವುದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಉದ್ದೇಶವಾಗಿದೆ.
ದೇಶದ ಅತ್ಯಂತ ಹಳೆಯ ಪಕ್ಷಗಳಲ್ಲಿ ಒಂದಾಗಿರುವ ಕಾಂಗ್ರೆಸ್ ಪಕ್ಷವು ಯುವ ಮತದಾರರನ್ನು ದೃಷ್ಟಿಯಲ್ಲಿರಿಸಿಕೊಂಡು ಹಾಗೂ ದೇಶದ ಕೃಷಿ ಮತ್ತು ಆರ್ಥಿಕತೆಯ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಮತ್ತು ಈ ದೇಶದ ರೈತರು, ಯುವಜನತೆ, ದಲಿತರು. ಮಹಿಳೆಯರು, ಉದ್ಯಮ, ದೇಶದ ಭದ್ರತೆ, ವಿದೇಶಾಂಗ ನೀತಿ ಸೇರಿದಂತೆ ಇನ್ನೂ ಹಲವಾರು ವಿಚಾರಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಣಾಳಿಕೆ ಸಮಿತಿಯ ಮುಖ್ಯಸ್ಥ ಮಾಜೀ ಸಚಿವ ಪಿ. ಚಿದಂಬರಂ ಅವರು ಹೇಳಿದರು.