Advertisement
ಶುಕ್ರವಾರ ಪಕ್ಷದ 42 ಪುಟಗಳ “ಅಭಯ ಹಸ್ತಂ’ ಹೆಸರಿನ ಪ್ರಣಾಳಿಕೆ ಬಿಡುಗಡೆ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, 6 ಗ್ಯಾರಂಟಿಗಳು ಮತ್ತು ರಾಜ್ಯಕ್ಕಾಗಿ ಹಲವು ನಿರ್ಣಯಗಳನ್ನೂ ಪ್ರಕಟಿಸಿದ್ದಾರೆ. “ಆಗಿದ್ದಾಗಲಿ, ಈ ಬಾರಿ ಕಾಂಗ್ರೆಸ್ ಅನ್ನೇ ಅಧಿಕಾರಕ್ಕೆ ತರಬೇಕು’ ಎಂಬ ನಿರ್ಧಾರಕ್ಕೆ ತೆಲಂಗಾಣದ ಜನರು ಬಂದಾಗಿದೆ ಎಂದೂ ಖರ್ಗೆ ನುಡಿದಿದ್ದಾರೆ.ಯುಪಿಎಸ್‌ಸಿ ಮಾದರಿಯಲ್ಲೇ ಟಿಎಸ್‌ಪಿಎಸ್‌ಸಿ(ತೆಲಂಗಾಣ ರಾಜ್ಯ ನಾಗರಿಕ ಸೇವಾ ಆಯೋಗ)ಯನ್ನು ಪುನಶ್ಚೇತನಗೊಳಿಸಲು ಹೊಸ ಕಾನೂನು ರಚಿಸಲಾಗುವುದು, ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲೇ ಖಾಲಿಯಿರುವ 2 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು, ಬಸಾರಾ ಐಐಐಟಿಯಂತೆ ಇನ್ನೂ 4 ಐಐಐಟಿಗಳನ್ನು ಸ್ಥಾಪಿಸಲಾಗುವುದು ಎಂದೂ ಖರ್ಗೆ ತಿಳಿಸಿದ್ದಾರೆ.
ಮಹಿಳೆಯರಿಗೆ ಮಾಸಿಕ 2,500 ರೂ. ಆರ್ಥಿಕ ನೆರವು, 500ರೂ.ಗೆ ಅಡುಗೆ ಅನಿಲ ಸಿಲಿಂಡರ್, ಬಸ್ ಪ್ರಯಾಣ ಉಚಿತ, ಎಲ್ಲ ಕುಟುಂಬಗಳಿಗೂ 200 ಯೂನಿಟ್‌ವರೆಗೆ ವಿದ್ಯುತ್ ಉಚಿತ, ರೈತ ಬಂಧು ಭರೋಸಾದಡಿ ಪ್ರತಿ ವರ್ಷ ರೈತರಿಗೆ 15 ಸಾವಿರ ರೂ.ಗಳ ಹೂಡಿಕೆ ಸಹಾಯಧನ, ಕೃಷಿ ಕಾರ್ಮಿಕರಿಗೆ 12 ಸಾವಿರ ರೂ.ಗಳ ಸಹಾಯಧನ, ಚೇಯುತ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ 4,000 ರೂ.ಗಳ ಸಾಮಾಜಿಕ ಪಿಂಚಣಿ ಮತ್ತು 10 ಲಕ್ಷ ರೂ.ಗಳ ವಿಮೆ, ಇಂದಿರಮ್ಮ ಇಂಡ್ಲು ಯೋಜನೆಯಡಿ ಮನೆಯಿಲ್ಲದವರಿಗೆ ನಿವೇಶನ ಮತ್ತು ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಆರ್ಥಿಕ ನೆರವು, ವಿದ್ಯಾರ್ಥಿಗಳಿಗೆ ಯುವ ವಿಕಾಸಮ್ ಯೋಜನೆಯಡಿ 5 ಲಕ್ಷ ರೂ. ಧನಸಹಾಯ, ತೆಲಂಗಾಣ ಚಳವಳಿಯಲ್ಲಿ ಹೋರಾಡಿದ ಎಲ್ಲರಿಗೂ 250 ಚದರ ಯಾರ್ಡ್ ನಿವೇಶನ ನೀಡುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದೆ. ಕರ್ನಾಟಕದ ಪ್ರಸ್ತಾಪ
ಕರ್ನಾಟಕದಲ್ಲಿ ನಾವು ಘೋಷಿಸಿದ್ದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದೇವೆ. ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿ ಕರ್ನಾಟಕದ ಮಹಿಳೆಯರು ವಿವಿಧ ದೇವಾಲಯಗಳಿಗೆ ಭೇಟಿ ನೀಡುವಂತಾಗಿದೆ. ಈ ಪ್ರಣಾಳಿಕೆಯು ನಮಗೆ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಇದ್ದಂತೆ. ಇದನ್ನು ಜಾರಿ ಮಾಡುವುದು ನಿಶ್ಚಿತ. ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಗ್ಯಾರಂಟಿಗಳನ್ನೂ ಅನುಷ್ಠಾನ ಮಾಡಲಾಗುತ್ತದೆ ಎಂದಿದ್ದಾರೆ ಖರ್ಗೆ.