ನೈಸ್ ಅಕ್ರಮದ ಕಳಂಕವನ್ನು ಬೆನ್ನಿ ಗಂಟಿಸಿಕೊಂಡಿರುವ ಶಾಸಕ ಅಶೋಕ ಖೇಣಿ ಸ್ಪರ್ಧೆಯಿಂದ ರಾಜ್ಯದ ಚಿತ್ತ ಬೀದರ್ ದಕ್ಷಿಣ ಕ್ಷೇತ್ರದತ್ತ ನೆಟ್ಟಿದೆ. ಕಾಂಗ್ರೆಸ್ ಸಂಸದೀಯ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ವಿರೋಧದ ನಡುವೆಯೂ “ಕೈ’ ಟಿಕೆಟ್ ಗಿಟ್ಟಿಸಿಕೊಂಡಿರುವ ಖೇಣಿಯನ್ನು ಮಣಿಸಲು ಬಂಡಾಯ ಕಾಂಗ್ರೆಸ್ಸಿಗರೇ ಸಜ್ಜಾಗುತ್ತಿದ್ದು, ಇದರ ಲಾಭ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ.
ಅಶೋಕ ಖೇಣಿ ಸೇರ್ಪಡೆ ಮೂಲಕ ನೈಸ್ ಅಕ್ರಮದ ಧೂಳನ್ನು “ಕೈ’ಗೆ ಒರೆಸಿಕೊಂಡಿರುವ ಕಾಂಗ್ರೆಸ್ ವಿರುದ್ಧ ಸ್ವಪಕ್ಷದ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಐದು ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟಿಸಿದ್ದ ಪ್ರಬಲ ಆಕಾಂಕ್ಷಿ ಚಂದ್ರಸಿಂಗ್‌ಗೆ (ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅಳಿಯ) ಇದರಿಂದ ಆಘಾತ ವಾಗಿದ್ದು, ಕಾಂಗ್ರೆಸ್ ವಿರುದ್ಧ ಬಂಡಾಯದ ಕಹಳೆ ಊದಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಬೇಕು, ಇಲ್ಲವಾದರೆ ತಟಸ್ಥರಾಗಿರಬೇಕೆಂಬ ನಿರ್ಣಯಕ್ಕೆ ಬಂದಿದ್ದಾರೆ. ಇದು ಖೇಣಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದ ಜೆಡಿಎಸ್‌ನ ಬಂಡೆಪ್ಪ ಖಾಶೆಂಪುರಗೆ ಲಾಭವಾಗುವುದು ದಟ್ಟವಾಗಿದೆ.
ಹಳ್ಳಿಗಳನ್ನೇ ಹೊಂದಿರುವ ಈ ಕ್ಷೇತ್ರ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಹುಲಸೂರ ಮೀಸಲು ಕ್ಷೇತ್ರ ಬದಲಾಗಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಈವರೆಗೆ ಕೇವಲ ಎರಡು ಚುನಾವಣೆಗಳನ್ನು ಮಾತ್ರ ಕ್ಷೇತ್ರ ಎದುರಿಸಿದೆ. 2008ರಲ್ಲಿ ಮೊದಲ ಚುನಾವಣೆ ಯಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿತ್ತು. 2004ರಲ್ಲಿ ಬೀದರ್ ಕ್ಷೇತ್ರದಿಂದ ಗೆದ್ದು ಕುಮಾರಸ್ವಾಮಿ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಬಂಡೆಪ್ಪ ಖಾಶೆಂಪುರ ದಕ್ಷಿಣದತ್ತ ಮುಖ ಮಾಡಿ ಬಿಜೆಪಿಯ ಸಂಜಯ ಖೇಣಿ ವಿರುದ್ಧ ಗೆದ್ದಿದ್ದರು. ನಂತರ 2013ರಲ್ಲಿ ಉದ್ಯಮಿ ಅಶೋಕ ಖೇಣಿ ಕ್ಷೇತ್ರಕ್ಕೆ ಪ್ರವೇಶಿಸಿ ಮಕ್ಕಳ ಪಕ್ಷದ ಮೂಲಕ ಜೆಡಿಎಸ್‌ನ ಖಾಶೆಂಪುರ ಅವರನ್ನು ಮಣಿಸಿ ಶಾಸಕರಾಗಿದ್ದರು. ಹೀಗಾಗಿ ಹೊಸ ಮುಖಗಳೇ ಆಯ್ಕೆಯಾಗುತ್ತಿರುವ ವಿಶೇಷ ಕ್ಷೇತ್ರ ಎನಿಸಿಕೊಂಡಿದೆ.
ಇಲ್ಲಿ ಲಿಂಗಾಯತ, ಮುಸ್ಲಿಂ ಸಮುದಾಯ ದವರ ಪ್ರಾಬಲ್ಯ ಹೆಚ್ಚಾಗಿದೆ. ಹಿಂದುಳಿದ ವರ್ಗದವರ ಸಂಖ್ಯೆ ನಂತರದ ಸ್ಥಾನದಲ್ಲಿದೆ. ಕಾಂಗ್ರೆಸ್‌ನ ಅಶೋಕ ಖೇಣಿ, ಬಿಜೆಪಿಯ ಶೈಲೇಂದ್ರ ಬೆಲ್ದಾಳೆ ಲಿಂಗಾಯತರಾಗಿದ್ದರೆ, ಜೆಡಿಎಸ್‌ನ ಬಂಡೆಪ್ಪ ಖಾಶೆಂಪುರ ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಕೃಷಿ ಅವಲಂಬಿತ ಹಳ್ಳಿ ಜನರನ್ನೇ ಹೊಂದಿರುವ ಕ್ಷೇತ್ರ ಇದಾಗಿದೆ. ಇಲ್ಲಿ ಜನರೊಂದಿಗೆ ಬೆರೆಯುವಂಥ ನಾಯಕರು ಬೇಕು. ಹೀಗಾಗಿ ಇಲ್ಲಿ ಜಾತಿ ಲೆಕ್ಕಾಚಾರ ಕೆಲಸ ಮಾಡುವುದು ತೀರಾ ಕಡಿಮೆ. ಒಂದು ವೇಳೆ ಲಿಂಗಾಯತ ಮತಗಳು ವಿಭಜನೆಯಾದರೆ ಜೆಡಿಎಸ್‌ಗೆ ಲಾಭ ಆಗಬಹುದು.
ಶಾಸಕ ಅಶೋಕ ಖೇಣಿ “ಸಿಂಗಾಪುರ’ದ ಕನಸು ಬಿತ್ತಿದ್ದ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕಾರಂಜಾ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ಈಡೇರಿಸಲಾಗಲಿಲ್ಲ. ಉದ್ಯಮಿಯಾಗಿರುವ ಖೇಣಿ ಕ್ಷೇತ್ರದ ಜನರ ಕೈಗೆ ಸಿಗುವುದಿಲ್ಲ, ಸಮಸ್ಯೆಗೆ ಸ್ಪಂದಿಸುವು ದಿಲ್ಲ ಎನ್ನುವ ಆರೋಪವೂ ಇದೆ. ಖೇಣಿ ಕಾಂಗ್ರೆಸ್ ಸೇರ್ಪಡೆಯಾಗಿ ತಿಂಗಳು ಕಳೆದರೂ ಕ್ಷೇತ್ರದಲ್ಲಿ ಕೈ ಕಾರ್ಯಕರ್ತರೊಂದಿಗೆ ಬೆರೆಯುವ ಪ್ರಯತ್ನ ಆಗುತ್ತಿಲ್ಲ ಎಂದೆನ್ನಲಾಗುತ್ತಿದೆ.
ತ್ರಿಕೋನ ಸ್ಪರ್ಧೆ ಏರ್ಪಡುವ ಸಂಭವ
ಜೆಡಿಎಸ್‌ನ ಬಂಡೆಪ್ಪ ಖಾಶೆಂಪುರ ಜನರೊಂದಿಗೆ ಬೆರೆಯುವ ಸರಳ ವ್ಯಕ್ತಿತ್ವವುಳ್ಳ ಅಭ್ಯರ್ಥಿ. ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಚಂದ್ರಸಿಂಗ್ ಅವರನ್ನು ಮನವೊಲಿಸುವ ಪ್ರಯತ್ನವನ್ನು ರಾಹುಲ್ ಗಾಂಧಿ ಆದಿಯಾಗಿ ರಾಜ್ಯ ನಾಯಕರು ಮಾಡುತ್ತಿದ್ದಾರೆ. ಇದಕ್ಕೆ ಮಣಿದು ಅವರು “ಕೈ’ಗೆ ಬೆಂಬಲ ನೀಡಿದರೆ ಖಾಶೆಂಪುರ ಮತ್ತು ಖೇಣಿ ನಡುವೆ ಪೈಪೋಟಿ ಹೆಚ್ಚಲಿದೆ. ಇನ್ನು ಚಂದ್ರಾಸಿಂಗ್ ಪಕ್ಷೇತರರಾಗಿ ಕಣಕ್ಕಿಳಿದರೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಂಭವವಿದೆ.
ಈ ಕ್ಷೇತ್ರವನ್ನು ಸಿಂಗಾಪುರ ಮಾದರಿ ಯಲ್ಲಿ ಅಭಿವೃದ್ಧಿ ಮಾಡುವ ಖೇಣಿ ಭರವಸೆ ಹುಸಿಯಾಗಿದೆ. ಇದರಿಂದ ಜನರು ಬೇಸತ್ತಿದ್ದು, ತಮಗೆ ಆತ್ಮೀಯತೆಯಿಂದ ಸ್ವಾಗತ ಸಿಗುತ್ತಿದೆ.
– ಬಂಡೆಪ್ಪ ಖಾಶೆಂಪುರ
ಕ್ಷೇತ್ರ ಯಾವುದೇ ಅಭಿವೃದ್ಧಿ ಕಂಡಿಲ್ಲ. ಕಾರಂಜಾ ನಿರಾಶ್ರಿತರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲೆಡೆ ಬಿಜೆಪಿ ಪರ ಅಲೆ ಇದೆ.
– ಶೈಲೇಂದ್ರ ಬೆಲ್ದಾಳೆ
ಜನಪರ ಆಡಳಿತ ನೀಡುವ ಸಿದ್ದರಾಮಯ್ಯ ನೋಡಿ ಕಾಂಗ್ರೆಸ್ ಸೇರಿದ್ದೇನೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದೇನೆ. ಈ ಬಾರಿಯೂ ಜನ ಆಶೀರ್ವದಿಸಲಿದ್ದಾರೆ.
– ಅಶೋಕ ಖೇಣಿ
– ಶಶಿಕಾಂತ ಬಂಬುಳಗೆ