Advertisement

ಸರ್ಕಸ್ ಕಂಪನಿಯಂತಿದ್ದ ‘ಕೈ’ಸಭೆಯಲ್ಲಿ ಸಿದ್ದು ಜೋಕರ್‌; ಸಚಿವ ರಾಮುಲು ತಿರುಗೇಟು

02:37 PM Oct 16, 2022 | Team Udayavani |

ಬಳ್ಳಾರಿ: `ಕಾಂಗ್ರೆಸ್ ಸಾರ್ವಜನಿಕ ಸಭೆ ಒಂದು ಸರ್ಕಸ್ ಕಂಪನಿಯಂತಿದ್ದು, ಆ ಕಂಪನಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೋಕರ್‌ನಂತೆ, ಯುದ್ಧಭೂಮಿಯಲ್ಲಿ ಜಂಬಕೊಚ್ಚಿಕೊಳ್ಳುವ ಉತ್ತರ ಕುಮಾರನಂತೆ ಕಾಣುತ್ತಿದ್ದರು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಭಾನುವಾರ ತಿರುಗೇಟು ನೀಡಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಶನಿವಾರ ನಡೆದ ಕಾಂಗ್ರೆಸ್ ಸಾರ್ವಜನಿಕ ಬಹಿರಂಗ ಸಭೆಯಲ್ಲಿ ತಮ್ಮನ್ನು ಪೆದ್ದ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಹಿಗ್ಗಾ ಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಬಸವಪ್ರಭು ಸ್ವಾಮೀಜಿಗೆ ಮುರುಘಾ ಮಠದ ಪೂಜಾ ಕೈಂಕರ್ಯಗಳ ಉಸ್ತುವಾರಿ: ಅಧಿಕೃತ ಆದೇಶ

ಕಾಂಗ್ರೆಸ್ ಸಾರ್ವಜನಿಕ ಸಭೆಯನ್ನು ನಾನು ಸಹ ಸೂಕ್ಷ್ಮವಾಗಿ ನೋಡುತ್ತಿದ್ದೆ. ಅದೊಂದು ಸರ್ಕಸ್ ಕಂಪನಿಯಂತೆ ಕಾಣುತ್ತಿದ್ದು, ಅದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಜೋಕರ್‌ನಂತೆ, ತಮ್ಮ ಬಗ್ಗೆ ತಾವೇ ಜಂಬಕೊಚ್ಚಿಕೊಳ್ಳುವ ಯುದ್ಧಭೂಮಿಯಲ್ಲಿನ ಉತ್ತರಕುಮಾರನಂತೆ ಕಂಡುಬಂದರು. ಇದು ನನ್ನ ಕೊನೆ ಚುನಾವಣೆ ಎಂದು ಸಿದ್ದರಾಮಯ್ಯರೇ ಹೇಳಿಕೊಂಡಂತೆ ಅವರ ಪಾಪದ ಕೊಡ ತುಂಬಿತುಳುಕುತ್ತಿದ್ದು, ಮುಂಬರುವ ದಿನಗಳಲ್ಲಿ ಜನರೇ ಅವರನ್ನು ಮನೆಗೆ ಕಳುಹಿಸುವ ಕೊನೆಯ ಚುನಾವಣೆಯಾಗಲಿದೆ ಎಂದು ಜರಿದ ಸಚಿವ ರಾಮುಲು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಸಿಎಂ ಬೊಮ್ಮಾಯಿ ಅವರ ಅಭಿವೃದ್ಧಿ ಚಕ್ರವ್ಯೂಹಕ್ಕೆ ಉತ್ತರಕುಮಾರ (ಸಿದ್ದು)ನಿಗೆ ತಲೆಕೆಟ್ಟು, ಭಯಕ್ಕೆ ಬೇಕಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ರಾಜಕಾರಣದ ಶಕುನಿ
ಸಿದ್ದರಾಮಯ್ಯ ರಾಜಕಾರಣದ ಶಕುನಿ ಇದ್ದಂತೆ ಎಂದು ಜರಿದ ಸಚಿವ ರಾಮುಲು, ಅವರ ರಾಜಕೀಯ ಇತಿಹಾಸವನ್ನು ಮೆಲುಕು ಹಾಕಿದಾಗ ಅದು ಸ್ಪಷ್ಟವಾಗುತ್ತದೆ. ಮೊದಲು ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ, ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಜೆಡಿಎಸ್‌ಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ನಂತರ ಕಾಂಗ್ರೆಸ್‌ಗೆ ಬಂದರು. ಅಲ್ಲಿ ಪಕ್ಕದಲ್ಲೇ ಇದ್ದು ಮಲ್ಲಿಕಾರ್ಜುನ ಖರ್ಗೆಯವರನ್ನು ತುಳಿದರು. ತನ್ನ ಸಿಎಂ ಸ್ಥಾನಕ್ಕೆ ಅಡ್ಡಿಯಾಗಲಿದ್ದಾರೆ ಎಂದು ಡಾ. ಜಿ.ಪರಮೇಶ್ವರರನ್ನು ಸೋಲಿಸಿದರು. ಇದೀಗ ಪುನಃ ಪಕ್ಕದಲ್ಲೇ ಇದ್ದು ಡಿ.ಕೆ.ಶಿವಕುಮಾರ್ ಅವರ ಬೆನ್ನಿಗೆ ಚೂರಿ ಹಾಕುವ ದ್ರೋಹಿ ನೀವು. ಡಿಕೆಶಿ ವಿರುದ್ಧ ದಾಖಲೆಗಳಿವೆ ಎಂದು ಬೇರೆಯವರ ಕದ ಬಡಿಯುತ್ತೀದ್ದಿರಿ ಎಂದು ಆರೋಪಿಸಿದರು.

Advertisement

ರಾಹುಲ್ ಥರ ಪೆದ್ದ ನಾನಲ್ಲ
ರಾಮುಲುಗೆ ಬುದ್ದಿ ಬಂದಿಲ್ಲ. ಪೆದ್ದ ಎಂದಿರುವ ಸಿದ್ದರಾಮಯ್ಯಗೆ ತಿರುಗೇಟು ನಿಡಿದ ಸಚಿವ ರಾಮುಲು, ನಾನು ರಾಹುಲ್‌ಗಾಂಧಿ ಥರ ಪೆದ್ದನಲ್ಲ. ಅಮೇಠಿಯಲ್ಲಿ ಸೋತ ರಾಹುಲ್‌ಗಾಂಧಿ, ಕೇರಳದ ವಯನಾಡ್‌ನಲ್ಲಿ ಗೆದ್ದಿದ್ದಾರೆ. ಚಾಮುಂಡಿ ಕ್ಷೇತ್ರದಲ್ಲಿ ಸೋತಿರುವ ಸಿದ್ದರಾಮಯ್ಯ, ಬಾದಾಮಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಗೆದ್ದರು. ಸಂಡೆ-ಮಂಡೆ ವಕೀಲಗಿರಿ ಮಾಡಿಕೊಂಡಿರುವ ಸಿದ್ದರಾಮಯ್ಯಗೆ ಬುದ್ಧಿ ಜಾಸ್ತಿ ಇದ್ದರೂ, ಮನುಷ್ಯತ್ವ ಹೃದಯವಂತಿಕೆಯಲ್ಲಿ ನನ್ನಷ್ಟು ನೀವು ದೊಡ್ಡವರಲ್ಲ. ಅನ್ನ ನೀಡಿದವರ ಮನೆಗೆ ಎಂದೂ ದ್ರೋಹ ಬಗೆದಿಲ್ಲ. ಜನರ ಜತೆಯಲ್ಲೇ ಇದ್ದು, ಹಲವು ಹೋರಾಟ ಮಾಡಿರುವ ವ್ಯಕ್ತಿನಾನು. ತಾಯಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎಂಬ ರಾಕ್ಷಸನ ಮುಖಕ್ಕೆ ಜನರು ಮಸಿ ಬಳಿದು ಸೋಲಿಸಿದರು ಎಂದು ತಿರುಗೇಟು ನೀಡಿದರು.

ಬಹಿರಂಗ ಚರ್ಚೆಗೆ ನಾನು ಸಿದ್ದ
ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯರ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಅದಕ್ಕೆ ಸಮಯ, ದಿನಾಂಕ ನಿಗದಿಪಡಿಸಿ, ನೀವು ಸವಾಲೆಸೆದ ಮುನಿಸಿಪಲ್ ಕಾಲೇಜು ಮೈದಾನದಲ್ಲೇ ಬಹಿರಂಗ ಚರ್ಚೆಗೆ ನಾನು ಸಿದ್ದ ಎಂದ ಸಚಿವ ರಾಮುಲು, ಚರ್ಚೆಗೆ ನೀವು ಸೂಚಿಸಿದ ಉಗ್ರಪ್ಪರನ್ನು ನಮ್ಮ ಜನರು ಸೋಲಿಸಿ ಎಂದೊ ಪಾವಗಡಕ್ಕೆ ಕಳುಹಿಸಿದ್ದಾರೆ. ಚರ್ಚೆಗೆ ನೀವೇ ಬನ್ನಿ ಎಂದು ಸಿದ್ದರಾಮಯ್ಯರಿಗೆ ಪ್ರತಿ ಸವಾಲೆಸೆದರು.

ಬೇಲ್ ಮೇಲಿದ್ದಾರೆ
ಕಾಂಗ್ರೆಸ್‌ನ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಸಹೋದರರು ಎಲ್ಲರೂ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಬೇಲ್ ಮೇಲಿದ್ದಾರೆ. ಅವರೊಂದಿಗೆ ಜಿಲ್ಲೆಯ ಶಾಸಕ ಬಿ.ನಾಗೇಂದ್ರ, ಮಾಜಿ ಸಚಿವ ಸಂತೋಷ್ ಲಾಡ್ ಸೇರಿ ಕಾಂಗ್ರೆಸ್‌ನ ಅರ್ಧ ಡಜನ್ ಮುಖಂಡರು ಬೇಲ್ ಮೇಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗುರುಲಿಂಗನಗೌಡ, ಜಿ.ವಿರೂಪಾಕ್ಷಗೌಡ, ಹೆಚ್.ಹನುಮಂತಪ್ಪ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಮಾಜಿ ಅಧ್ಯಕ್ಷ ಪಾಲಣ್ಣ, ಓಬಳೇಶ್, ಪಾಲಿಕೆ ಸದಸ್ಯರು ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next