Advertisement

ರಫೇಲ್‌ ಒಪ್ಪಂದ ಖಂಡಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

05:14 PM Sep 29, 2018 | |

ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ 1,670 ಕೋಟಿ ರೂಪಾಯಿ ಒಂದರಂತೆ ಮಧ್ಯವರ್ತಿಗಳನ್ನಿಟ್ಟು ಕೇವಲ 36 ಯುದ್ಧ ವಿಮಾನ ಖರೀದಿಸಲು ಮುಂದಾಗಿದ್ದಾರೆ. ಇದರಿಂದ 41 ಸಾವಿರ ಕೋಟಿ ರೂ. ದೇಶಕ್ಕೆ ನಷ್ಟ ಉಂಟಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ಗೌತಮ ದೂರಿದರು.

Advertisement

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಿಂದ ಮುಖ್ಯ ಬೀದಿಗಳಲ್ಲಿ ಪ್ರತಿಭಟಿಸಿ ಬಳಿಕ ಸುಭಾಷ್‌ ವೃತ್ತದಲ್ಲಿ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರು.
 
ಯುಪಿಎ ಸರ್ಕಾರ ಫ್ರಾನ್ಸ್‌ನೊಂದಿಗೆ 2012ರಲ್ಲಿ ರಫೇಲ್‌ ಯುದ್ಧ ವಿಮಾನ ಖರೀಸಿಗೆ 526 ಕೋಟಿಗೆ ಒಂದರಂತೆ 126 ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡು ಅದರಲ್ಲಿ 16 ಪೂರ್ಣ ಪ್ರಮಾಣದ ವಿಮಾನಗಳು ಹಾಗೂ 108 ಯುದ್ಧ ವಿಮಾನಗಳ ಬಿಡಿ ಭಾಗಗಳು, ತಂತ್ರಜ್ಞಾನದ ವರ್ಗಾವಣೆಯ ಮೂಲಕ ಬೆಂಗಳೂರು ಹೆಚ್‌ಎಎಲ್‌ಗೆ ತಯಾರಿಸಲು ನೀಡುವುದರಿಂದ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸುವ ಪ್ರಯತ್ನ ನಡೆದಿತ್ತು. ಆದರೆ ಪ್ರಧಾನಿ ಮೋದಿ ಅವರ 1,670 ಕೋಟಿ ರೂಪಾಯಿಗೆ ಒಂದರಂತೆ 36 ಯುದ್ಧ ವಿಮಾನ ಖರೀದಿಸುವ ನಿರ್ಧಾರದಿಂದ ದೇಶಕ್ಕೆ ನಷ್ಟವಾಗಲಿದೆ. ಆದ್ದರಿಂದ ಜೆಪಿಸಿ ಸಮಿತಿಗೆ ತನಿಖೆ ಮಾಡಿಸಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹಲವು ಅವಾಂತರ ಸೃಷ್ಟಿಸಿದೆ. ಜಿಎಸ್‌ಟಿ, ನೋಟು ಅಮಾನ್ಯ, ತೈಲದ ಮೇಲಿನ ಅಬಕಾರಿ ತೆರಿಗೆಯನ್ನು 12 ಬಾರಿ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಈ ವೇಳೆ ಶಾಸಕ ಶರಣಬಸ್ಸಪ್ಪ ಗೌಡ ದರ್ಶನಾಪುರ, ಮಾಜಿ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ, ಚಿದಾನಂದಪ್ಪ ಕಾಳಬೆಳಗುಂದಿ, ಮಂಜೂಳಾ ಗೂಳಿ, ರಾಘವೇಂದ್ರ ಮಾನಸಗಲ, ಮರೆಪ್ಪ ಬಿಳಾರ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next