Advertisement

ರಾಜ್ಯಪಾಲರ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

12:58 PM May 18, 2018 | Team Udayavani |

ಮೈಸೂರು: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ಕಲ್ಪಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ದ್ವಿಮುಖ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ನಗರ ಹಾಗೂ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

Advertisement

ನಗರದ ನ್ಯಾಯಾಲಯದ ಬಳಿಯ ಗಾಂಧಿ ಪ್ರತಿಮೆ ಎದುರು ಮಾಜಿ ಶಾಸಕ ವಾಸು ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವ ರಾಜ್ಯಪಾಲರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರಮೋದಿ ದೇಶದ ಸಂವಿಧಾನವನ್ನು ತಮ್ಮ ಪಕ್ಷದ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಅದರ ಮೂಲಕ ರಾಜ್ಯಪಾಲರು ಮೋದಿ ಸೂಚನೆ ಆಧಾರದಲ್ಲಿ ನಡೆದುಕೊಳ್ಳುತ್ತ ಪ್ರಜಾತಂತ್ರ ವ್ಯವಸ್ಥೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯನ್ನು ಸಂಪೂರ್ಣ ನಾಶ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿ ವಿವಿಧ ಘೋಷಣೆಗಳನ್ನು ಕೂಗಿದರು.

ಬಹುಮತವಿಲ್ಲದ ಪಕ್ಷಕ್ಕೆ ಬಹುಮತ ಸಾಬೀತುಪಡಿಸಲು 15 ದಿನಗಳವರೆಗೆ  ಕಾಲಾವಕಾಶ ನೀಡಿರುವ ರಾಜ್ಯಪಾಲರು ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದಾರೆ. ರಾಜ್ಯಪಾಲರು ರಾಜಭವನವನ್ನು ಬಿಜೆಪಿ ಕಚೇರಿಯಾಗಿ ಬದಲಿಸಿದ್ದು, ಆ ಮೂಲಕ ಒಂದು ಪಕ್ಷದ ಪರವಾಗಿ ಏಕಪಕ್ಷೀಯ ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ.

ಅಲ್ಲದೆ ಸರ್ಕಾರ ರಚನೆಯಲ್ಲಿ ಆಗುತ್ತಿರುವ ಪಕ್ಷಪಾತ ನೀತಿಯನ್ನು ತಿರಸ್ಕಾರ ಮಾಡಿ ಸಂವಿಧಾನ ಬದ್ಧ, ನ್ಯಾಯ ಸಮ್ಮತ ತೀರ್ಮಾನಗಳನ್ನು ಕೈಗೊಳ್ಳಬೇಕಾದ ಹೊಣೆಗಾರಿಕೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲಿದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯ ಕೂಡಲೇ ಮಧ್ಯ ಪ್ರವೇಶಿಸಿ, ರಾಜ್ಯಪಾಲರ ನಿರ್ಧಾರಗಳನ್ನು ದೋಷಾರೋಪ ಪಟ್ಟಿಯೆಂದು ಪರಿಗಣಿಸಿ ರಾಜ್ಯಪಾಲರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

Advertisement

ಪ್ರತಿಭಟನೆಯಲ್ಲಿ ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ಪಾಲಿಕೆ ಸದಸ್ಯರಾದ ಸುನಿಲ್‌, ಸುನಿಲ್‌ ಕುಮಾರ್‌, ಜಗದೀಶ್‌, ಪ್ರಶಾಂತ್‌ಗೌಡ, ಪ್ರಕಾಶ್‌ ಕುಮಾರ್‌, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ನಂದಿನಿ, ಬಸವರಾಜ ನಾಯಕ, ಜಗದೀಶ್‌ಗೌಡ, ಸುರೇಶ್‌ ಚಿಕ್ಕಪಾಳ್ಯ, ದೀಪಕ್‌ರಾಜ್‌, ಮೋದಾಮಣಿ, ಪುಷ್ಪಾಲತಾ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next