ಬೆಂಗಳೂರು: ಕಿತ್ತೂರು ಚೆನ್ನಮ್ಮ ಹಾಗೂ ಒನಕೆ ಓಬವ್ವ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕ ಪ್ರತಿಭಟನೆ ಮಾಡಿದ್ದು, ಐಟಿ ವಿಭಾಗದಿಂದ ನಗರ ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಅಲ್ಲದೇ ಮಾಜಿ ಸಚಿವೆ ರಾಣಿ ಸತೀಶ್ ಸಂಸದ ಪ್ರತಾಪ್ ಸಿಂಹ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಪ್ರತಾಪ್ ಸಿಂಹ ಸಂಸದರಾಗಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವರ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿ, ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಪ್ರತಾಪ್ ಸಿಂಹ ಸಂಸದರಾದ ಮೇಲೆ ಅವರ ಬಗ್ಗೆ ಹೆಮ್ಮೆ ಇತ್ತು. ಆದರೆ, ಅವರ ವರ್ತನೆ ಸರಿಯಿಲ್ಲ. ಗುಂಡ್ಲುಪೇಟೆ ಉಪ ಚುನಾವಣೆ ಸಂದರ್ಭದಲ್ಲಿಯೂ ಗೀತಾ ಮಹದೇವ ಪ್ರಸಾದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ಮಹಿಳೆಯರಿಗೆ ಗೌರವ ಕೊಡದ ಸಂಸದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಸಂಘಟನೆಗಳ ಜೊತೆ ಸೇರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗುವುದು,ಪ್ರತಾಪ್ ಸಿಂಹ ತಮ್ಮ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸದಿದ್ದರೇ,ರಾಜ್ಯಾದ್ಯಂತ ಉಗ್ರ ಹೋರಾಟ ಸಹ ನಡೆಸಲಾಗುವುದು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಮಹಿಳಾ ಕಾಂಗ್ರೆಸ್ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ ನಡೆಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್, ಇತಿಹಾಸ ಗೊತ್ತಿಲ್ಲದೇ ಪ್ರತಾಪ್‌ಸಿಂಹ ವೀರ ನಾರಿಯರಿಗೆ ಅವಮಾನ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಕೀಳು ಅಭಿರುಚಿ ಹೊಂದಿರುವ ಪ್ರತಾಪ್ ಸಿಂಹಗೆ ನಾಚಿಕೆಯಾಗಬೇಕು,
ಪ್ರತಾಪ್ ಸಿಂಹ ಇತಿಹಾಸದ ವೀರ ವನಿತೆಯರಿಗೆ ಅವಮಾನ ಮಾಡುವ ಮೂಲಕ ಸ್ತ್ರೀ ಕುಲಕ್ಕೆ ಅವಮಾನ ಮಾಡಿದ್ದಾರೆ. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಇನ್ನು ಕೆಪಿಸಿಸಿ ಐಟಿ ವಿಭಾಗದಿಂದ ಪ್ರತಾಪ್ ಸಿಂಹನ ವಿರುದ್ಧ ದೂರು ದಾಖಲಿಸಲಾಯಿತು.