Advertisement

ನಿಮ್ಮ ಪ್ರತಿಭಟನೆ ಕುವೆಂಪು ವಿರುದ್ಧವೇ? ಕಾಂಗ್ರೆಸ್ ನವರೇ ಉತ್ತರ ಕೊಡಿ ಎಂದ ಬಿಜೆಪಿ

03:30 PM Jun 09, 2022 | Team Udayavani |

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಕುರಿತು ದಿನದಿಂದ ದಿನಕ್ಕೆ ರಾಜಕೀಯ ಪಕ್ಷಗಳ ಕೆಸರೆರಚಾಟ ಮುಂದುವರಿದಿದ್ದು, ಈಗ ‘ಉತ್ತರಿಸಿ ಕಾಂಗ್ರೆಸ್’ ಎಂಬ ಹ್ಯಾಷ್ ಟ್ಯಾಗ್ ಮೂಲಕ ಬಿಜೆಪಿ ಸರಣಿ ಪ್ರಶ್ನೆಗಳನ್ನು ಕೇಳಿದೆ.

Advertisement

‘ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆ. ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಇದ್ದ ಪಾಠವನ್ನು ಕಾಂಗ್ರೆಸ್‌ ಸರ್ಕಾರ ನೇಮಿಸಿದ ಸಮಿತಿ ತೆಗೆದುಹಾಕಿತ್ತು. ಇದನ್ನು ಸಮರ್ಥಿಸಿ ಪ್ರತಿಭಟನೆ ಮಾಡುತ್ತಿದ್ದೀರಾ?’ ಎಂದು ಬಿಜೆಪಿ ‘ಕೂ’ ಮಾಡಿದೆ.

‘ಮುಡಂಬಡಿತ್ತಾಯ ಸಮಿತಿ ಪರಿಷ್ಕರಿಸಿದ ಪಠ್ಯಗಳಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಎಂಟು ಪಾಠಗಳಿದ್ದವು. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅದಕ್ಕೂ ಕತ್ತರಿ ಹಾಕಲಾಯಿತು. ಆದರೆ ಬಿಜೆಪಿ ಸರ್ಕಾರ ನೇಮಿಸಿದ ಸಮಿತಿ ಕುವೆಂಪು ಅವರ ಹತ್ತು ಪಠ್ಯ ಅಳವಡಿಸಿದೆ. ಕಾಂಗ್ರೆಸ್‌ ಪ್ರತಿಭಟನೆ ಕುವೆಂಪು ವಿರುದ್ಧವೇ?’ ಎಂದು ಪ್ರಶ್ನಿಸಿದೆ.

‘ನವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಇದ್ದ ಪಠ್ಯವನ್ನು ಕಾಂಗ್ರೆಸ್‌ ಸರ್ಕಾರ ತೆಗೆದುಹಾಕಿತ್ತು. ಈಗ ಅದೇ ಹಿಂದಿನ ಪಠ್ಯ ಮುಂದುವರೆಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದೆ. ಅಂದರೆ ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಚರಿತ್ರೆ ಇರಬಾರದೇ? ಭೂಕಂದಾಯದ ಪತ್ರಗಳಲ್ಲಿದ್ದ ಕನ್ನಡವನ್ನು ತೆಗೆದು ಪರ್ಷಿಯನ್ ಭಾಷೆ ಹೇರಿದ ಟಿಪ್ಪು ಬಗ್ಗೆ ಕನ್ನಡ ಭಾಷಾಭಿಮಾನಿ ಎಂದು ಬರಗೂರು ಸಮಿತಿ ವೈಭವಿಕರಿಸಿತ್ತು. ಇದನ್ನು ಸಮರ್ಥಿಸುವ ಸಲುವಾಗಿ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದೆಯೇ?’ ಎಂದು ಬಿಜೆಪಿ ಕೇಳಿದೆ.

ಇದನ್ನೂ ಓದಿ:ಕಾಂಗ್ರೆಸ್‌ಗೆ ಅಧಿಕಾರಕ್ಕೇರುವ ಭ್ರಮೆ: ಬಿಎಸ್‌ವೈ

Advertisement

‘ಡಿಕೆಶಿ ಹಾಗೂ ಸಿದ್ದರಾಮಯ್ಯನವರೇ, ನಾಡಿನ ಹೆಮ್ಮೆಯ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವನ ಪಾಠಗಳನ್ನು ನಿಮ್ಮದೇ ಸರ್ಕಾರ ನೇಮಿಸಿದ್ದ ಸಮಿತಿ ಪಠ್ಯದಿಂದ ತೆಗೆದುಹಾಕಿತ್ತು. ಇದನ್ನು ಬೆಂಬಲಿಸಿ ಇಂದು ಪ್ರತಿಭಟನೆ ಮಾಡುತ್ತಿದ್ದೀರಾ? ದೇಶಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಮುಡಂಬಡಿತ್ತಾಯ ಸಮಿತಿ ಪಠ್ಯದಲ್ಲಿ ಸೇರಿಸಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಪಠ್ಯವನ್ನು ಕಿತ್ತು ಹಾಕಿತ್ತು. ಇದನ್ನು ಸಮರ್ಥಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ?’ ಎಂದು ಕೂ ನಲ್ಲಿ ಕೇಳಿದೆ.

‘ಭಾರತದ ಹಿರಿಮೆಯನ್ನು ಜಗತ್ತಿಗೆ ಪರಿಚಯಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದ ಅವರ ಪಠ್ಯವನ್ನು ಮಕ್ಕಳಿಗೆ ಪ್ರೇರಣೆಯಾಗಲೆಂದು ಸೇರಿಸಲಾಗಿತ್ತು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅದಕ್ಕೂ ಕತ್ತರಿ ಹಾಕಲಾಯಿತು. ವಿವೇಕಾನಂದರ ಪಠ್ಯ ಬೇಡವೇ ಬೇಡ ಎಂದು ಕಾಂಗ್ರೆಸ್‌ ಪ್ರತಿಭಟಿಸುತ್ತಿದೆಯೇ?’ ಎಂದು ಸವಾಲೆಸೆದಿದೆ.

ನಾಡು ಕಟ್ಟುವಲ್ಲಿ ಮೈಸೂರು ಮಹಾರಾಜರ ಪಾತ್ರ ಅತ್ಯಂತ ಸ್ಮರಣೀಯ. ಕಾಂಗ್ರೆಸ್ಸಿಗರೇ, ಕರುನಾಡಿಗೆ ಭದ್ರಬುನಾದಿ ಹಾಕಿಕೊಟ್ಟ ಒಡೆಯರ ವಂಶಸ್ಥರನ್ನು ಪಠ್ಯದಲ್ಲಿ ಅಳವಡಿಸಿರುವುದರನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದೀರಾ ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next