Advertisement

ಬೆಲೆ ಏರಿಕೆ ಖಂಡಿಸಿ ಸೈಕಲ್‌ ರ್ಯಾಲಿ

05:25 PM Jul 08, 2021 | Team Udayavani |

ಹುಬ್ಬಳ್ಳಿ: ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪಕ್ಷದ ಮಹಾನಗರ ಜಿಲ್ಲಾ ಘಟಕದಿಂದ ಬುಧವಾರ ಸೈಕಲ್‌ ರ್ಯಾಲಿ ನಡೆಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಯಿತು.

Advertisement

ಬುಧವಾರ ಇಲ್ಲಿನ ಡಾ|ಬಿ.ಆರ್‌.ಅಂಬೇಡ್ಕರ್‌ ವೃತ್ತದಿಂದ ಸೈಕಲ್‌ ಜಾಥಾ ಆರಂಭವಾಗಿ ಕಿಮ್ಸ್‌ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಮುಕ್ತಾಯಗೊಂಡಿತು. ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರಕಾರ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರು ಪರಿತಪಿಸುವಂತೆ ಮಾಡಿದೆ. ಸಂಕಷ್ಟದ ಸಮಯದಲ್ಲಿ ಜನರ ಹಿತ ಕಾಪಾಡಬೇಕಿದ್ದ ಕೇಂದ್ರ ಸರಕಾರ, ಬೆಲೆ ಹೆಚ್ಚಳ ಮೂಲಕ ಜನರ ಸಂಕಷ್ಟ ಹೆಚ್ಚುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮಾಜಿ ಸಚಿವ ಎಂ.ಎಂ.ಹಿಂಡಸಗೇರಿ ಮಾತನಾಡಿ, ಸಾರ್ವಜನಿಕ ಉದ್ದಿಮೆ, ಆಸ್ತಿಗಳನ್ನು ಅಂಬಾನಿ, ಆದಾನಿಯಂತಹ ಶ್ರೀಮಂತರಿಗೆ ಪರಭಾರೆ ಮಾಡುವುದು, ಖಾಸಗೀಕರಣ, ತೈಲ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯಾಗಿದೆ. ಸುಳ್ಳು, ಭರವಸೆ, ಭಾವನಾತ್ಮಕ ಮಾತುಗಳಿಗೆ ಮನಸೋತಿದ್ದ ಜನರು ಬಿಜೆಪಿಯ ಜನವಿರೋಧಿ ಕೆಲಸದಿಂದ ಭ್ರಮನಿರಸನಗೊಂಡಿದ್ದಾರೆ. ಅವರ ಅಚ್ಛೇದಿನ ಸಾಮಾನ್ಯ ಜನರಿಗೆ ಅರ್ಥವಾಗಿದೆ. 60-70 ರೂ. ಅಡುಗೆ ಎಣ್ಣೆ ಇಂದು 200 ಗಡಿ ದಾಟಿದೆ. ಬಡವರ ಇಷ್ಟು ದುಬಾರಿ ಎಣ್ಣೆ ಖರೀದಿಸಿ ಉಣ್ಣಲು ಸಾಧ್ಯವೇ. ಜನರನ್ನು ಬಿಕಾರಿಗಳನ್ನಾಗಿ ಮಾಡಿ ಶ್ರೀಮಂತರ ಮನೆ ತುಂಬಿಸುವ ಪ್ರಧಾನಿ ಈ ದೇಶಕ್ಕೆ ಬೇಕಿಲ್ಲ ಎಂದರು.

ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು ಮಾತನಾಡಿ,ಬಿಜೆಪಿ ನಾಯಕರು ದೇಶದ ಬದಲಾವಣೆ ಮಾಡುತ್ತಾರೆ ಎನ್ನುವ ಕನಸಿನೊಂದಿಗೆ ಮತ ಹಾಕಿ ಗೆಲ್ಲಿಸಿದ್ದರು. ಆದರೆ ಅಂದು ಮತ ಹಾಕಿದವರು ಬಿಜೆಪಿ ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ದೇಶದ ಉದ್ಧಾರದ ಬದಲು ಇಡೀ ದೇಶವನ್ನೇ ಮಾರಲು ಹೊರಟಿದ್ದಾರೆ. ಕೋವಿಡ್‌ನಿಂದ ಜನರು ಕೈಯಲ್ಲಿದ್ದ ಹಣ ಕಳೆದುಕೊಂಡಿದ್ದಾರೆ. ಜೀವನ ನಡೆಸುವುದೇ ದುಸ್ತರವಾಗಿರುವ ಸಂದರ್ಭದಲ್ಲಿ ಎಲ್ಲಾ ಬೆಲೆ ಹೆಚ್ಚಳ ಮಾಡಿ ಜನ ದ್ರೋಹಿ ಕೆಲಸ ಬಿಜೆಪಿ ಸರಕಾರ ಮಾಡುತ್ತಿದೆ. ಭ್ರಷ್ಟಾಚಾರ, ಜನ ವಿರೋಧಿ, ಕಾರ್ಮಿಕ, ರೈತ ವಿರೋಧಿ ನೀತಿಗಳ ಮೂಲಕ ಅಚ್ಚೇ ದಿನ್‌ ತೋರಿಸುತ್ತಿದೆ ಎಂದು ವಾಗ್ಧಾಳಿ ನಡೆಸಿದರು.

ಕೆಪಿಸಿಸಿ ಅಲ್ಪ ಸಂಖ್ಯಾತ ರಾಜ್ಯಾಧ್ಯಕ್ಷ ವೈ.ಸೈಯದ್‌, ಮುಖಂಡರಾದ ಎಫ್‌.ಎಚ್‌.ಜಕ್ಕಪ್ಪನವರ, ಸದಾನಂದ ಡಂಗನವರ, ವೆಂಕಟೇಶ ಮೇಸ್ತ್ರಿ, ಪ್ರಕಾಶ ಜಾಧವ, ಅಲ್ತಾಫ್‌ ಕಿತ್ತೂರು, ದಶರಥ ವಾಲಿ, ಬಷೀರ್‌ ಅಹ್ಮದ್‌ ಗುಡಮಾಲ್‌, ರಜತ ಉಳ್ಳಾಗಡ್ಡಿಮಠ, ಮಲ್ಲಿಕಾರ್ಜುನ ಯಾತಗೇರಿ, ಶ್ರೀಕಾಂತ ಯಾತಗೇರಿ, ಶ್ರೀಕಾಂತ ಬಾರಕೇರ, ಮಣಿಕಂಠ ಗುಡಿಹಾಳ ಸೇರಿದಂತೆ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next