ಪಡುಬಿದ್ರಿ: ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಸ್ಥಾಪಿಸಲುದ್ದೇಶಿಸಿರುವ ಟೋಲ್ ಗೇಟ್ ರದ್ದುಪಡಿಸುವಂತೆ ಮತ್ತು ಈ ರಸ್ತೆಯಲ್ಲಿ ಟೋಲ್ ಸ್ಥಾಪನೆ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆ.21ರ ಬುಧವಾರ ಕಂಚಿನಡ್ಕದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ಹಿಂದಿನ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಪಡುಬಿದ್ರಿ-ಕಾರ್ಕಳ ರಸ್ತೆಯಲ್ಲಿ ಟೋಲ್ ಅಳವಡಿಕೆ ಪ್ರಕ್ರಿಯೆ ಆರಂಭಗೊಂಡಿತ್ತು. ಆಗ ಬೆಳ್ಮಣ್ ನಲ್ಲಿ ನಡೆದ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರಕಾರ ಅದನ್ನು ಕಂಚಿನಡ್ಕಕ್ಕೆ ರವಾನಿಸಿದೆ. ಈಗ ಇಲ್ಲಿಂದಲೇ ಓಡಿಸುವ ಉದ್ದೇಶಕ್ಕಾಗಿ ಈ ಹೋರಾಟ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಕಂಚಿನಡ್ಕದಲ್ಲಿ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.
ಕಂಚಿನಡ್ಕ ಟೋಲ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ, ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸಿ, ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಪಕ್ಷದ ಮೇಲೆ ಬಂದಿರುವ ಆರೋಪದಿಂದ ಮುಕ್ತವನ್ನಾಗಿಸಲು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಸಮಸ್ಯೆಗೆ ಪಕ್ಷದ ನೆಲೆಯಿಂದ, ಪಕ್ಷದ ವತಿಯಿಂದಲೇ ನ್ಯಾಯ ದೊರಕಿಸಿಕೊಡುವ ಉದ್ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಸುರತ್ಕಲ್ ಟೋಲ್, ಹೆಜಮಾಡಿ ಟೋಲ್, ಸಾಸ್ತಾನ ಟೋಲ್ ಜತೆಗೆ ಕಂಚಿನಡ್ಕದಲ್ಲೂ ಟೋಲ್ ಪ್ರಾರಂಭಕ್ಕೆ ಹುನ್ನಾರ ನಡೆಯುತ್ತಿದೆ. ಈ ಟೋಲ್ ಸ್ಥಾಪನೆ ಹಿಂದಿನ ಬಿಜೆಪಿ ಸರಕಾರದ ಕೊಡುಗೆಯಾಗಿದೆ. ಒಂದೇ ಜಿಲ್ಲೆಯಲ್ಲಿ ಮೂರು ಟೋಲ್ ಗಳನ್ನು ಸ್ಥಾಪಿಸಲು ನಮ್ಮ ವಿರೋಧವಿದೆ. ಅದಕ್ಕಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಗುರುವಾರ ಸಚಿವರನ್ನೊಳಗೊಂಡು ಮುಖ್ಯಮಂತ್ರಿ ಬಳಿಗರ ನಿಯೋಗ ತೆರಳಿ ಮನವಿ ಸಲ್ಲಿಸುವವರಿದ್ದೇವೆ ಎಂದರು.
ಕರಾವಳಿಯಲ್ಲಿ ನಡೆಯುತ್ತಿರುವ ಬಹುತೇಕ ಪ್ರತಿಭಟನೆಗಳು ದಾರಿ ತಪ್ಪುತ್ತಿವೆ. ಮಾಫಿಯಾಗಳು, ರಾಜಕೀಯ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು ಪ್ರತಿಭಟನೆಯ ದಾರಿ ತಪ್ಪಿಸುತ್ತಿದ್ದಾರೆ. ಪ್ರತಿಭಟನೆಯ ಮೂಲಕ ಸಂಬಂಧ ಪಟ್ಟ ಯೋಜನೆಯಿಂದ ಗುತ್ತಿಗೆ, ಲಾಭ ಪಡೆದುಕೊಳ್ಳುವ ಹುನ್ನಾರ, ಕೈಗಾರಿಕೆಗಳಿಂದ ಹಫ್ತಾ ವಸೂಲಿ ಮಾಡುವ ಹುನ್ನಾರವನ್ನು ನಾವು ಶಾಂತಿಯುತ ಪ್ರತಿಭಟನೆಯ ಮೂಲಕ ವಿರೋಧಿಸುತ್ತೇವೆ ಎಂದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರು ಕೇವಲ ಅಧಿಕಾರಕ್ಕಾಗಿ ಅಲ್ಲ, ಮತ ಕೊಟ್ಟ ಮತದಾರರ ಸಮಸ್ಯೆಗೆ ಧ್ವನಿಯಾಗಿ, ಸ್ಪಂಧಿಸುತ್ತಾ ಬರುತ್ತಿದ್ದಾರೆ. ಅವರ ಕೈ ಬಲಪಡಿಸುವುದಕ್ಕಾಗಿ ನಾವೆಲ್ಲರೂ ಜತೆ ಸೇರಿದ್ದೇವೆ. ಟೋಲ್ ಹೋರಾಟಕ್ಕೆ ತಾರ್ಕಿಕ ಅಂತ್ಯ ದೊರಕಿಸಿಕೊಡುವ ಪ್ರಯತ್ನಕ್ಕೆ ಪೂರ್ಣ ಬೆಂಬಲವಿದೆ ಎಂದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಹಿಂದಿನ ಬಿಜೆಪಿ ಸರಕಾರದ ಪಾಪದ ಕೂಸನ್ನು ಕಾಂಗ್ರೆಸ್ ಪಕ್ಷದ ಫಲ ಎಂದು ಹೇಳುವ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಕಂಚಿನಡ್ಕ ಟೋಲ್ ಸಹಿತವಾಗಿ ಕರಾವಳಿಯಲ್ಲಿ ಅಕ್ರಮ, ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಈ ಹೋರಾಟದಲ್ಲಿ ಗೆಲುವು ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಕಂಚಿನಡ್ಕ ಟೋಲ್ ವಿರುದ್ಧ ಎಲ್ಲರೂ ಒಗ್ಗೂಡಿ, ಪಕ್ಷಾತೀತವಾಗಿ ಹೋರಾಟಕ್ಕೆ ರೂಪು ರೇಷೆ ಹಾಕಿಕೊಂಡಿದ್ದರೂ, ಆ ವೇದಿಕೆಯಲ್ಲಿ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಧಿಕ್ಕಾರ ಕೂಗಿದ ಪರಿಣಾಮ ಸ್ವಾಭಿಮಾನ ಮೆರೆದು ಈ ಪ್ರತಿಭಟನೆ ನಡೆಸುತ್ತಿದ್ದೇವೆ. ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಹೋರಾಟ ನಡೆಸಿ, ಗೆಲುವು ಸಾಧಿಸಲಿದ್ದೇವೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ. ಶೆಟ್ಟಿ, ಪಕ್ಷದ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಹರೀಶ್ ಕಿಣಿ, ಕಾಪು ದಿವಾಕರ ಶೆಟ್ಟಿ, ರೋಲ್ಪಿ ಡಿ ಕೋಸ್ತ, ಶೇಖರ್ ಹೆಜ್ಮಾಡಿ, ಶರ್ಪುದ್ದೀನ್ ಶೇಖ್, ದೀಪಕ್ ಕೋಟ್ಯಾನ್, ಅಬ್ದುಲ್ ಅಜೀಜ್, ಶಾಂತಲತಾ ಶೆಟ್ಟಿ, ಶಿವಾಜಿ ಸುವರ್ಣ, ಕರುಣಾಕರ ಪೂಜಾರಿ, ಗುಲಾಂ ಮಹಮ್ಮದ್, ಭುಜಂಗ ಶೆಟ್ಟಿ, ವಹೀದ್ ಶೇಖ್, ಅಶೋಕ್ ಸಾಲ್ಯಾನ್, ವಿನಯ ಬಲ್ಲಾಳ್, ದೀಪಕ್ ಕುಮಾರ್ ಎರ್ಮಾಳು, ಸುನೀಲ್ ಬಂಗೇರ, ಅಮೀರ್ ಮಹಮ್ಮದ್, ರಮೀಜ್ ಹುಸೇನ್, ರಮೇಶ್ ಕಾಂಚನ್, ನವೀನ್ ಶೆಟ್ಟಿ, ವಿವಿಧ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.