ರಾಯಚೂರು: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದರೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜೂ.29ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಎಂಎಲ್‌ಸಿ ಎನ್.ಎಸ್.ಬೋಸರಾಜ್ ತಿಳಿಸಿದರು.
ನಗರದ ಪಕ್ಷದ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಡಾ| ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿ ಕೇಂದ್ರ ಸರ್ಕಾರದ ನಡೆ ಖಂಡಿಸಲಾಗುವುದು. ಕೇಂದ್ರ ಸರ್ಕಾರ ಬಡಜನರ ಜೀವನದ ಜತೆ ಚಲ್ಲಾಟವಾಡುತ್ತಿದೆ. ಕೋವಿಡ್ ಸಂಕಷ್ಟದಿಂದ ಜನ ಸಾಕಷ್ಟು ತೊಂದರೆಗೆ ಸಿಲುಕಿದ್ದರೆ; ತೈಲ ಬೆಲೆ ಹೆಚ್ಚಿಸುವ ಮೂಲಕ ಮತ್ತಷ್ಟು ಹೊರೆ ಹಾಕುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿದರೂ ಸರ್ಕಾರ ಮಾತ್ರ ಹೆಚ್ಚುವರಿ ಸುಂಕ ವಿಧಿ ಸುತ್ತಿದೆ. ಸರ್ಕಾರಕ್ಕೆ ಇದರಿಂದ 18 ಲಕ್ಷ ಕೋಟಿ ರೂ. ಸುಂಕ ಸಂಗ್ರಹವಾಗಿದೆ. 2014ರಲ್ಲಿ ಪೆಟ್ರೋಲ್ ಮೇಲೆ 9.20 ಪೈಸೆ, ಡೀಸೆಲ್ ಮೇಲೆ 3.46 ಪೈಸೆ ಸುಂಕ ವಿ ಧಿಸಲಾಗುತ್ತಿತ್ತು. ಆದರೆ, ಈಗ ಸರ್ಕಾರ ಕ್ರಮವಾಗಿ 23.78 ಪೈಸೆ, 28.32 ಪೈಸೆ ಸುಂಕ ವಿಧಿಸುವ ಮೂಲಕ ಕಷ್ಟಕಾಲದಲ್ಲೂ ಜನರ ಸುಲಿಗೆ ಮಾಡುತ್ತಿದೆ ಎಂದು ದೂರಿದರು.
ದೇಶದಲ್ಲಿ ಇಂದು ಕೊರೊನಾ ಈ ಮಟ್ಟದಲ್ಲಿ ಹೆಚ್ಚಾಗಲು ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳೇ ಕಾರಣ. ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಆರಂಭದಲ್ಲಿ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳದ ಪರಿಣಾಮ ಈಗ ಎದುರಿಸುವಂತಾಗಿದೆ. ಮೋದಿ ಸರ್ಕಾರ ಜ.19ರಂದು ಮೊದಲ ಕೊರೊನಾ ಸೋಂಕು ದೃಢಪಟ್ಟಾಗ ಎಚ್ಚೆತ್ತುಕೊಳ್ಳದೆ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದರು ಎಂದು ದೂರಿದರು.
ಎನ್‌ಆರ್‌ಬಿಸಿ ಕಾಲುವೆ ನಿರ್ಮಾಣ ಕಾಮಗಾರಿ ಕಳಪೆಯಾಗಿರುವ ಆರೋಪಗಳು ಕೇಳಿ ಬರುತ್ತಿವೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಲಾಗಿದೆ. ಮುಂದಿನ ವಾರ ಕಾಂಗ್ರೆಸ್ ನಿಯೋಗ ಭೇಟಿ ಮಾಡಿ ತನಿಖೆಗೆ ಒತ್ತಾಯಿಸಲಿದೆ ಎಂದರು.
ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಶಾಸಕ ದದ್ದಲ್ ಬಸವನಗೌಡ, ಎ.ವಸಂತಕುಮಾರ, ಜಿ.ಬಸವರಾಜ ರೆಡ್ಡಿ, ಜಯಣ್ಣ, ಶಿವಮೂರ್ತಿ ಇತರರು ಇದ್ದರು.