Advertisement

ರಾಜ್ಯಕ್ಕೆ ವಿದ್ಯುತ್ ನೀಡುತ್ತಿರುವವರಿಗೆ ವಿದ್ಯುತ್ ಇಲ್ಲ: ಮಧು ಬಂಗಾರಪ್ಪ ಆಕ್ರೋಶ

05:42 PM Mar 05, 2022 | Team Udayavani |

ಸಾಗರ: ರಾಜ್ಯಕ್ಕೆ ವಿದ್ಯುತ್ ನೀಡುತ್ತಿರುವ ಸಾಗರ ಪ್ರಾಂತ್ಯಕ್ಕೆ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ಸರ್ಕಾರ ಇದೆಯೋ ಸತ್ತಿದೆಯೋ ಗೊತ್ತಾಗುತ್ತಿಲ್ಲ ಎಂದು ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ತಾಳಗುಪ್ಪದಲ್ಲಿ ಶನಿವಾರ ತಾಳಗುಪ್ಪ ಹೋಬಳಿ ಕಾಂಗ್ರೆಸ್ ಘಟಕದ ವತಿಯಿಂದ ಅಸಮರ್ಪಕ ವಿದ್ಯುತ್ ಪೂರೈಕೆ, ಅರಣ್ಯಹಕ್ಕು ಸೇರಿದಂತೆ ವಿವಿಧ ಭೂಹಕ್ಕಿಗಾಗಿ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾಡಿಗೆ ವಿದ್ಯುತ್ ನೀಡಲು ಸರ್ವಸ್ವವನ್ನು ಕಳೆದುಕೊಂಡ ಜಿಲ್ಲೆಯ ಜನರಿಗೆ ಸರ್ಕಾರ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರು ತಮ್ಮ ಬೆಳೆಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯುತ್ ಕಂಬ ಇದೆ, ವಿದ್ಯುತ್ ತಂತಿ ಹಾಕಿದ್ದಾರೆ, ವಿದ್ಯುತ್ ಸಹ ಇದೆ. ಆದರೆ ಸಮರ್ಪಕವಾಗಿ ವಿದ್ಯುತ್ ಕೊಡುತ್ತಿಲ್ಲ. ಇಂಧನ ಸಚಿವರು ಉಚಿತವಾಗಿ ವಿದ್ಯುತ್ ಕೊಡುತ್ತೇವೆ ಎಂದು ಹೇಳುತ್ತಿರುವುದು ಕೇವಲ ಘೋಷಣೆಯಾಗಿಯೇ ಉಳಿದಿದೆ. ಉಚಿತ ವಿದ್ಯುತ್ ಕೊಡುವ ಮಾತು ದೂರ ಇರಲಿ. ನಮಗೆ ಸಮರ್ಪಕ ವಿದ್ಯುತ್ ಕೊಟ್ಟರೆ ಸಾಕು ಎಂದ ಮಧು ಬಂಗಾರಪ್ಪ, ಜಿಲ್ಲೆಯ ಜನರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅರಣ್ಯ ಭೂಮಿ ಅಡಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಸಾರಸಗಟಾಗಿ ವಜಾ ಮಾಡುತ್ತಿದ್ದಾರೆ. ಸೊರಬ ಕ್ಷೇತ್ರದಲ್ಲಿ 22 ಸಾವಿರ ಅರ್ಜಿ ಇದ್ದು, 10 ಸಾವಿರ ಅರ್ಜಿ ವಜಾ ಮಾಡಿದ್ದಾರೆ. ಮೀಸಲು ಅರಣ್ಯದಲ್ಲಿ ಮನೆ ಕಟ್ಟಿಕೊಂಡಿದ್ದಾರೆಂದು ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದೆ. 94 ಸಿ, 94 ಸಿಸಿ ಮತ್ತು ಬಗರ್‌ಹುಕುಂ ಯಾವ ಯೋಜನೆಯಲ್ಲೂ ಜನರಿಗೆ ಭೂಮಿ ಹಕ್ಕು ಸಿಗುತ್ತಿಲ್ಲ. ನಿಮಗೆ ಭೂಮಿಹಕ್ಕು ಕೊಡುತ್ತೇವೆಂದು ಮತ ಪಡೆದು ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಮಾತು ತಪ್ಪಿದೆ. ಮುಂದಿನ ದಿನಗಳಲ್ಲಿ ಭೂಮಿಹಕ್ಕಿಗೆ ಒತ್ತಾಯಿಸಿ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಪಾಲ್ಗೊಂಡಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಸಿದ್ದತೆ ನಡೆಸಲಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕಾಗೋಡು ತಿಮ್ಮಪ್ಪ ಮತ್ತು ಮಧು ನೇತೃತ್ವದಲ್ಲಿ ಸರ್ಕಾರ ಮತ್ತು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿರುವುದು ರೈತಪರ, ಜನಪರ ಸರ್ಕಾರವಲ್ಲ. ಇದು ರೈತರ ಮತ್ತು ಜನವಿರೋಧಿ ಸರ್ಕಾರವಾಗಿದೆ. ಇಂತಹ ಸರ್ಕಾರ ಮತ್ತು ಶಾಸಕರನ್ನು ನಾವು ಎಲ್ಲೂ ನೋಡಿಲ್ಲ. ಬಂಡವಾಳಶಾಹಿಗಳ ಪರವಾಗಿರುವ ಇಂತಹ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ವಿದ್ಯುತ್ ಸಮಸ್ಯೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಾರೆ. ಜೊತೆಗೆ ಭೂಮಿಹಕ್ಕಿಗೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಕ್ರಮ ಸರ್ಕಾರ ಹಾಕಿಕೊಂಡಿಲ್ಲ ಎಂದು ದೂರಿದರು.

Advertisement

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಾ. ರಾಜನಂದಿನಿ, ಶಿವಮೂರ್ತಿ, ಅಣ್ಣಪ್ಪ ಬರದವಳ್ಳಿ, ರತ್ನಾಕರ ಹೊನಗೋಡು, ಜ್ಯೋತಿ ಕೋವಿ, ಅಶೋಕ ಬರದವಳ್ಳಿ, ಜಯಂತ್ ಯಲಕುಂದ್ಲಿ, ಸುಧಾಕರ ಕುಗ್ವೆ, ಲೋಕೇಶ್ ಗಾಳಿಪುರ, ಮನೋಜ್ ಸಿರವಂತೆ, ಮಂಡಗಳಲೆ ಹುಚ್ಚಪ್ಪ, ಕೆ.ಹೊಳೆಯಪ್ಪ, ಸರೋಜಮ್ಮ, ವಸಂತ ನಾಯ್ಕ್ ಸಿದ್ದಾಪುರ, ಅಣ್ಣಪ್ಪ ಹಾಲಘಟ್ಟ, ಮಂಜುನಾಥ್ ಗುಡ್ಡೆಮನೆ, ಜಿ.ಟಿ.ಅಜ್ಜಪ್ಪ, ಶ್ರೀಧರ್ ಹುಲ್ತಿಕೊಪ್ಪ, ಗಣಪತಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next