ತಿಪಟೂರು: ಪೌರತ್ವ ಕಾನೂನು ತಿದ್ದುಪಡಿ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ನಗರದ ಸಿಂಗ್ರಿನಂಜಪ್ಪ ವೃತ್ತದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಕಾಂಗ್ರೆಸ್, ಜೆಡಿಎಸ್ ಕಾಯಕರ್ತರು, ಮುಖಂಡರು ರಸ್ತೆ ತಡೆ ನಡೆಸಿ ಶಾಂತಿಯುತ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಉದ್ಯೋಗ ನಾಶ: ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು ಮಾತನಾಡಿ, ದೇಶದಲ್ಲಿನ ಜಿಡಿಪಿ ನೆಲಕಚ್ಚುತ್ತಿದ್ದು, ಪದವಿ ಪಡೆದ ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದ್ದು, ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ದುರ್ಬಲವಾಗಿ ದಿವಾಳಿಯತ್ತ ಸಾಗುತ್ತಿದೆ. ಕಾರ್ಖಾನೆಗಳು ಮುಚ್ಚಿಹೋಗುತ್ತಿದ್ದು ಇದನ್ನು ಗಮನಹರಿಸದ ಪ್ರಧಾನಿ ಮೋದಿ, ದೇಶದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಮಾಡುತ್ತಾ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಹಿಂದೂ, ಮುಸ್ಲಿಮರು ನಮ್ಮ ದೇಶದಲ್ಲಿ ಸಮಾನವಾಗಿ ಒಂದೇ ಎಂದು ಬಾಳುತ್ತಿದ್ದೇವೆ. ಆದರೆ ಇದು ವೋಟ್‌ಬ್ಯಾಂಕ್‌ಗಾಗಿ ಕಾಯ್ದೆ ತಿದ್ದುಪಡಿ ನೆಪದಲ್ಲಿ ತಂತ್ರಗಾರಿಕೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಥಾಸ್ಥಿತಿ ಕಾನೂನು ಇರಲಿ: ಕಾಂಗ್ರೆಸ್ ಮುಖಂಡ ಅಣ್ಣಯ್ಯ ಮಾತನಾಡಿ, ಇದು ಧರ್ಮದಲ್ಲಿ ವೈಷಮ್ಯ ಬಿತ್ತುವಂತಾಗಿದೆ. ಸಂವಿಧಾನವನ್ನು ಉಳಿಸಬೇಕು. ಕಾಯ್ದೆ ತಿದ್ದುಪಡಿ ಮಾಡುವ ಈ ಕೆಲಸದಿಂದ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ದೇಶದಲ್ಲಿ ಮಾಡುವ ಕೆಲಸ ಬೇಕಾದಷ್ಟಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಂಗಳೂರಿಗೆ ಹೋಗಿ ಅಲ್ಲಿನ ಸ್ಥಿತಿಗತಿ ವಿಚಾರಿಸಿ ಸಾಂತ್ವನ ಹೇಳಬಹುದು. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೋಗುವಂತಿಲ್ಲ ಎಂದರೆ ಯಾವ ನ್ಯಾಯ. ಯಾವ ಸರ್ಕಾರವೂ ಇಂತಹ ಕೆಲಸ ಮಾಡಿಲ್ಲ ಆದರೆ ಇವರು ಜೇನುಗೂಡಿಗೆ ಕೈ ಇಡುವ ಕೆಲಸ ಮಾಡಿದ್ದಾರೆ ಇದು ಸರಿಯಲ್ಲ, ಕೂಡಲೇ ಈ ಕಾಯ್ದೆ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಪ್ರಚೋದನೆ: ತಾಪಂ ಮಾಜಿ ಅಧ್ಯಕ್ಷ ಸುರೇಶ್ ಮಾತನಾಡಿ, ಇದು ಮತಕ್ಕಾಗಿ ಮಾಡುತ್ತಿರುವ ಕೆಲಸ. ನಾವು ಭಾರತೀಯರೆಲ್ಲರೂ ಒಂದೇ. ಮೋದಿ ಹಾಗೂ ಅಮಿತ್ ಷಾ ಅವರು ದೇಶವನ್ನು ಪ್ರಚೋದನೆ ಮಾಡುತ್ತಿದ್ದಾರೆ. ಕಾಯ್ದೆ ತಿದ್ದುಪಡಿ ರದ್ದುಗೊಳಿಸಿ ರೈತರು, ಯುವಕರು ಹಾಗೂ ದೇಶದ ಜನರನ್ನು ರಕ್ಷಣೆ ಮಾಡುವ ಕೆಲಸವಾಗಲಿ ಎಂದರು.
ಹುಳಿ ಹಿಂಡುವ ಕೆಲಸ: ಮುಸ್ಲಿಂ ಮುಖಂಡ ಅಲ್ಲಾಬಕ್ಷ್ ಮಾತನಾಡಿ, ಕಾಯ್ದೆ ತಿದ್ದುಪಡಿಯಿಂದಾಗಿ ದೇಶದಲ್ಲಿ 36 ಜನ ಮುಸ್ಲಿಮರು ಸತ್ತಿದ್ದಾರೆ. ಇದಕ್ಕೆ ಯಾವ ಪ್ರಧಾನಿಯಾಗಲಿ, ಮುಖ್ಯಮಂತ್ರಿಗಳಾಗಲಿ ಮಾತನಾಡಿಲ್ಲ. ಹಿಂದೂ ಹಾಗೂ ಮುಸ್ಲಿಮರು ಯಾವುದೇ ಬೇಧವಿಲ್ಲದೇ ಜೀವನ ನಡೆಸುತ್ತಿದ್ದು, ಇದು ಧರ್ಮ ಧರ್ಮಗಳ ನಡುವೆ ಹುಳಿ ಹಿಂಡುವ ಕೆಲಸ ಎಂದರು. ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಎಪಿಎಂಸಿ ಉಪಾಧ್ಯಕ್ಷ ಬಜಗೂರು ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಎನ್.ಪ್ರಕಾಶ್, ತಾಪಂ ಅಧ್ಯಕ್ಷ ಶಿವಸ್ವಾಮಿ, ಸದಸ್ಯರಾದ ಜಯಂತಿ, ರವಿಕುಮಾರ್, ಸುರೇಶ್, ನಗರಸಭೆ ಸದಸ್ಯೆ ವಿನುತಾ, ಮಹೇಶ್, ಮುಖಂಡರಾದ ಬೆನ್ನಾಯ್ಕನಹಳ್ಳಿ ಶಿವಪ್ಪ, ತನ್ವೀರ್‌ವುಲ್ಲಾ ಶರೀಫ್ ಇದ್ದರು.