ಸಾಗರ: ಪಡವಗೋಡು ಗ್ರಾಮದಲ್ಲಿ ಗ್ರಾಪಂ ಚುನಾವಣೆಯ ಕಾರಣ ಕಾಂಗ್ರೆಸ್ ಕಾರ್ಯಕರ್ತ ಮೋಹನ ಎಂಬವರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಇಲ್ಲಿಯ ಕಾಂಗ್ರೆಸ್ ಪಕ್ಷದ ಪ್ರಮುಖರು ಸೋಮವಾರ ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಡವಗೋಡು ಗ್ರಾಮದಲ್ಲಿ ಮೋಹನ ಅವರ ಮನೆಗೆ ನುಗ್ಗಿ ಭಾನುವಾರ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಅವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಆದರೆ ಇದೇ ಆರೋಪಿಗಳು ಸೋಮವಾರ ಪುನಃ ಮೋಹನ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಾಲೂಕಿನ ಕೆಲವೆಡೆ ಬಿಜೆಪಿ ಕಾರ್ಯಕರ್ತರು ಗ್ರಾಪಂ ಚುನಾವಣೆಯ ನಂತರ ಗೂಂಡಾ ವರ್ತನೆ ತೋರುತ್ತಿದ್ದಾರೆ. ಹಾಡಹಗಲೇ ಹಲ್ಲೆ ನಡೆಸುವ ಮೂಲಕ ಕಾನೂನು ವ್ಯವಸ್ಥೆ ಬಗ್ಗೆ ಅಗೌರವ ತೋರಿಸಿರುವ ಪುಂಡರ ಕ್ರಮ ಖಂಡನೀಯ. ಪೊಲೀಸ್ ಇಲಾಖೆ ಪದೇಪದೇ ಗೂಂಡಾಗಿರಿ ಮಾಡುತ್ತಿರುವ ಇಂತಹವರನ್ನು ಮಟ್ಟ ಹಾಕಬೇಕು. ತಕ್ಷಣ ಹಲ್ಲೆ ಮಾಡಿದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದನ್ನೂ ಓದಿ :ಹಳ್ಳಿ ಪ್ರತಿ ಮನೆಗೂ ಶುದ್ಧ ಜಲ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್, ಕಾರ್ಯದರ್ಶಿ ಮಹಾಬಲ ಕೌತಿ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ಜಿಪಂ ಸದಸ್ಯೆ ಅನಿತಾಕುಮಾರಿ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಪ್ರಮುಖರಾದ ಸುಧಾಕರ ಕುಗ್ವೆ, ಆನಂದ ಭೀಮನೇರಿ, ನಾಗರಾಜಸ್ವಾಮಿ, ಕೆ. ಹೊಳೆಯಪ, ಮನೋಜ್ ಕುಗ್ವೆ, ಅಣ್ಣಪ್ಪ ಭೀಮನೇರಿ, ತುಕಾರಾಮ್ ಶಿರವಾಳ ಇನ್ನಿತರರು ಇದ್ದರು.