ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷಗಾದಿಗೆ ಬರೋಬ್ಬರಿ 24 ವರ್ಷಗಳ ನಂತರ ಚುನಾವಣೆ ನಡೆಯುವ ಮೂಲಕ ಗಾಂಧಿಯೇತರ ಅಧ್ಯಕ್ಷರ ನೇಮಕದೊಂದಿಗೆ ಇತಿಹಾಸ ಬರೆಯಲು ಸಜ್ಜಾಗಿದೆ. ಸೋಮವಾರ (ಅಕ್ಟೋಬರ್ 17) ಅಧ್ಯಕ್ಷ ಚುನಾವಣೆಯ ಮತದಾನ ಆರಂಭವಾಗಿದ್ದು, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಇದನ್ನೂ ಓದಿ:ಆಸೀಸ್ ವಿರುದ್ಧ ಯಶಸ್ವಿ ಅಭ್ಯಾಸ: ಕೊಹ್ಲಿ ಫೀಲ್ಡಿಂಗ್- ಶಮಿ ಬೌಲಿಂಗ್ ಗೆ ಒಲಿದ ಜಯ
ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಯಾಗಿ ಮತ ಚಲಾಯಿಸಿದ್ದಾರೆ. ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಪಿ.ಚಿದಂಬರಂ, ಜೈರಾಮ್ ರಮೇಶ್ ಸೇರಿದಂತೆ ಹಲವು ಮುಖಂಡರು ಮತ ಚಲಾಯಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಸ್ಪರ್ಧೆಯಲ್ಲಿದ್ದು, ಪಕ್ಷದ 9,100 ಪ್ರತಿನಿಧಿಗಳು ಮತ ಚಲಾಯಿಸುವ ಮೂಲಕ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.
ದೇಶದ ವಿವಿಧ ಭಾಗಗಳಲ್ಲಿ ಮತದಾನ ನಡೆಯುತ್ತಿದ್ದು, 65 ಮತಗಟ್ಟೆಗಳನ್ನು ತೆರೆಯಲಾಗಿದೆ. ಅಕ್ಟೋಬರ್ 19ರಂದು ಎಐಸಿಸಿ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಅಂದು ಸಂಜೆ ಹೊಸ ಅಧ್ಯಕ್ಷರ ಘೋಷಣೆಯಾಗಲಿದೆ.