Advertisement

ಕಾಂಗ್ರೆಸ್‌ ಸಾರಥಿ ಯಾರು?

11:12 PM Sep 20, 2022 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷರ ಆಯ್ಕೆಗೆ ಬರೋಬ್ಬರಿ 20 ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದ್ದು, ನಾಮಪತ್ರ ಸಲ್ಲಿಕೆಗೆ ದಿನ ಸಮೀಪಿಸುತ್ತಿರುವಂತೆಯೇ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ.

Advertisement

ಈಗಾಗಲೇ 8ಕ್ಕೂ ಹೆಚ್ಚು ರಾಜ್ಯಗಳ ಕಾಂಗ್ರೆಸ್‌ ಘಟಕಗಳು ರಾಹುಲ್‌ ಗಾಂಧಿ ಅವರೇ ಮುಂದಿನ ಅಧ್ಯಕ್ಷರಾಗಬೇಕು ಎಂಬ ನಿರ್ಣಯ ಕೈಗೊಂಡಿದ್ದರೂ, ರಾಹುಲ್‌ ಅವರು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಇದರ ನಡುವೆಯೇ ಸಂಸದ ಶಶಿತರೂರ್‌ ಅವರು “ಅಧ್ಯಕ್ಷ ಸ್ಥಾನ’ಕ್ಕೆ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದರೆ, ರಾಜಸ್ಥಾನದ ಮುಖ್ಯಮಂತ್ರಿ, ಹಿರಿಯ ನಾಯಕ ಅಶೋಕ್‌ ಗೆಹ್ಲೋಟ್ ಅವರೂ ಸದ್ಯದಲ್ಲೇ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾತುಗಳು ಕೇಳಿಬರತೊಡಗಿವೆ.

ಸೋಮವಾರವಷ್ಟೇ ಪಕ್ಷದ ಮಧ್ಯಾಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ತರೂರ್‌, ಸ್ಪರ್ಧಿಸಲು “ನಿರಾಕ್ಷೇಪಣೆ’ಯನ್ನು ಪಡೆದಿ­ದ್ದಾರೆ. “ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಯಾರ ಹೆಸರನ್ನೂ ಸೂಚಿಸುವುದಿಲ್ಲ. ಈ ವಿಚಾರದಲ್ಲಿ ನಿಷ್ಪಕ್ಷ ನಿಲುವು ತಾಳುತ್ತೇನೆ’ ಎಂದು ಸೋನಿಯಾ ಅವರು ತರೂರ್‌ಗೆ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ. ಸೋನಿಯಾ ಅವರ ಈ ಮಾತಿನಿಂದ ತರೂರ್‌ಗೆ ಹೆಚ್ಚಿನ ಬಲ ಬಂದಂತಾಗಿದ್ದು, ಚುನಾವಣ ಕಣಕ್ಕೆ ಧುಮುಕುವ ಅವರ ಇಚ್ಛೆ ಇಮ್ಮಡಿಗೊಂಡಿದೆ.

ಕೇರಳ ನಾಯಕರ ಅತೃಪ್ತಿ: ಆದರೆ ತರೂರ್‌ ಸ್ಪರ್ಧೆ ಬಗ್ಗೆ ಕೇರಳದ ಕಾಂಗ್ರೆಸ್‌ ನಾಯಕರೇ ಅಸಮಾಧಾನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೆಹರೂ ಕುಟುಂಬಕ್ಕೆ ಪ್ರಾಮುಖ್ಯ ನೀಡುವವರಿಗಷ್ಟೇ ನಮ್ಮ ಮತ. ರಾಹುಲ್‌ ಅವರೇ ಅಧ್ಯಕ್ಷ ಸ್ಥಾನಕ್ಕೇರಲಿ ಎಂಬುದು ನಮ್ಮ ಬಯಕೆ ಎಂದು ಕೇರಳದ ಸಂಸದರಿಬ್ಬರು ಹೇಳಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಹಿರಿಯ ನಾಯಕ ಜೈರಾಂ ರಮೇಶ್‌ ಅವರೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. “ಇಡೀ ಪಕ್ಷವೇ ಭಾರತ್‌ ಜೋಡೋ ಯಾತ್ರೆಯ ಯಶಸ್ಸಿಗಾಗಿ ಶ್ರಮಿಸುತ್ತಿದೆ. ಯಾರು ಬೇಕಿದ್ದರೂ ಚುನಾವಣೆಗೆ ಸ್ಪರ್ಧಿಸಬಹುದು. ಅದಕ್ಕೆ ಅವರು ಯಾರ ಅನುಮತಿಯನ್ನೂ ಪಡೆಯಬೇಕಾದ ಅಗತ್ಯವಿಲ್ಲ. ಆದರೆ ನಾನು ವೈಯಕ್ತಿಕವಾಗಿ ಒಬ್ಬ ಸರ್ವಸಮ್ಮತ ಅಭ್ಯರ್ಥಿಯೇ ಆಯ್ಕೆ ಆಗಬೇಕೆಂದು ಬಯಸುತ್ತೇನೆ. ಅದು ಸಾಧ್ಯವಾಗದಿದ್ದರೆ, ಪಕ್ಷವು ಚುನಾವಣೆ ನಡೆಸಲಿದೆ’ ಎಂದಿದ್ದಾರೆ.

Advertisement

ವೇಣುಗೋಪಾಲ್‌ ಭೇಟಿ: ಈ ಎಲ್ಲ ಬೆಳವಣಿಗೆಗಳ ನಡುವೆಯೇ ಮಂಗಳವಾರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ದಿಲ್ಲಿಯಲ್ಲಿ ಸೋನಿಯಾರನ್ನು ಭೇಟಿಯಾಗಿದ್ದಾರೆ. ಬಳಿಕ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರ ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತ­ವಾಗಿರುತ್ತದೆ. ಅಲ್ಲದೇ ಪಾರದರ್ಶಕವಾಗಿರುತ್ತದೆ. ಯಾರು ಬೇಕಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದಿದ್ದಾರೆ.

ರಾಹುಲ್‌ ಸ್ಪರ್ಧೆ ಸಾಧ್ಯತೆಯಿಲ್ಲ :

ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿ ರಾಹುಲ್‌ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಪಕ್ಷದ ಮೂಲ ಗಳು ತಿಳಿಸಿವೆ. ಭಾರತ್‌ ಜೋಡೋ ಯಾತ್ರೆಯಲ್ಲಿ­ರುವ ಅವರು ದಿಲ್ಲಿಗೆ ಬರಲಿಕ್ಕಿಲ್ಲ. ಪ್ರಸ್ತುತ ಯಾತ್ರೆಯು ಕೇರಳದಲ್ಲಿದ್ದು, ಸೆ. 29ರಂದು ಕರ್ನಾಟಕ ಪ್ರವೇಶಿಸಲಿದೆ. ಒಟ್ಟು 150 ದಿನಗಳ ಕಾಲ ಯಾತ್ರೆ ನಡೆಯಲಿದೆ. ಇದರಲ್ಲಿ ಬ್ಯುಸಿಯಾಗಿ­ರುವ ರಾಹುಲ್‌ಗೆ, ಚುನಾವಣೆಗೆ ಸ್ಪರ್ಧೆ, ನಾಮ ಪತ್ರ ಸಲ್ಲಿಕೆ ಮುಂತಾದ ಪ್ರಕ್ರಿಯೆಯಲ್ಲಿ ಭಾಗವಹಿ ಸುವ ಉತ್ಸುಕತೆ ಇಲ್ಲ ಎಂದು ಹೇಳಲಾಗಿದೆ.

ಗೆಹ್ಲೋಟ್ ಷರತ್ತು? :

ಅ.17ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್ ಅವರು ಮನಸ್ಸಿಲ್ಲದ ಮನಸ್ಸಿಂದ ಒಪ್ಪಿದ್ದಾರೆ. ಆದರೆ ಅದಕ್ಕೆ ಅವರು ಕೆಲವು ಷರತ್ತುಗಳನ್ನೂ ಹಾಕಿದ್ದಾರೆ ಎನ್ನಲಾಗಿದೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದರೂ, ರಾಜಸ್ಥಾನ ಸಿಎಂ ಆಗಿ ಕೆಲಕಾಲ ಮುಂದುವರಿಯಬೇಕು. ನಾನು ರಾಷ್ಟ್ರ ರಾಜಕಾರಣ ಪ್ರವೇಶಿಸಿದರೂ, ರಾಜಸ್ಥಾನದ ಮೇಲೆ ನನಗೆ ಸಂಪೂರ್ಣ ಹಿಡಿತವಿರಬೇಕು ಎಂದು ಅವರು ಹೈಕಮಾಂಡ್‌ಗೆ ಷರತ್ತು ಹಾಕಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next