Advertisement

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ತಯಾರಿ

12:10 PM Aug 13, 2018 | |

ಬೀದರ: ಕರ್ನಾಟಕದಿಂದ ಹೆಚ್ಚು ಸ್ಥಾನ ಗೆಲ್ಲುವ ಉಮೇದಿನೊಂದಿಗೆ ಕಾಂಗ್ರೆಸ್‌ ಪಕ್ಷ 2019ರ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ್ದು, ಪಕ್ಷದ ಕಾರ್ಯಕರ್ತರನ್ನು ಅಣಿಗೊಳಿಸಲು ವೇದಿಕೆ ಸಜ್ಜುಗೊಳಿಸುತ್ತಿದೆ. ಬಿಜೆಪಿಯನ್ನು ಸೋಲಿಸುವ ಮೂಲಕ ಕೇಂದ್ರದಲ್ಲಿ ಆಡಳಿತಕ್ಕೆ ಬರುವ ಗುರಿ ಹೊಂದಿದ್ದು, ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿರುವ ಬಸವಣ್ಣನ ಕರ್ಮ ಭೂಮಿಯಿಂದಲೇ ರಣಕಹಳೆ ಮೊಳಗಿಸಲಿದೆ. ಚುನಾವಣೆ ಪ್ರಚಾರ ಕಾರ್ಯಕ್ರಮ ಉದ್ಘಾಟನೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಸೋಮವಾರ ಬೀದರಗೆ ಆಗಮಿಸಲಿದ್ದಾರೆ.

Advertisement

2004ರಂತೆ ಅವಧಿಗಿಂತ ಮೊದಲೇ ಲೋಕಸಭೆ ಚುನಾವಣೆ ಘೋಷಿಸಿದರೂ ಅಚ್ಚರಿಯಿಲ್ಲ ಎಂಬುದು ಕಾಂಗ್ರೆಸ್‌ ಮುಖಂಡರ ಲೆಕ್ಕಚಾರವಾಗಿದೆ. 2014ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 17, ಕಾಂಗ್ರೆಸ್‌ 9 ಹಾಗೂ ಜೆಡಿಎಸ್‌ 2 ಸ್ಥಾನ ಪಡೆದುಕೊಂಡಿದ್ದವು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ 20ಕ್ಕೂ ಅಧಿಕ ಸ್ಥಾನ ಪಡೆಯುವ ತವಕದಲ್ಲಿದೆ ಎನ್ನಲಾಗಿದೆ.

2014ರಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಿದ್ದು ಈಗ ಇತಿಹಾಸ. ರಾಹುಲ್‌ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವುದೇ ಪ್ರಥಮ ವಿಷಯವಾಗಿದೆ. ನರೇಂದ್ರ ಮೋದಿ ಸರಕಾರದ ವೈಫಲ್ಯಗಳನ್ನು ಜನರ ಬಳಿಗೆ ತೆಗೆದು ಕೊಂಡು ಹೋಗಲು ಜನಧ್ವನಿ ಕಾರ್ಯಕ್ರಮ ನೆರವಾಗಲಿದೆ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಹೊಂದಿದೆ.

ಕೆಪಿಸಿಸಿ ನೂತನ ಅಧ್ಯಕ್ಷ ದಿನೇಶ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಂತ್ರಗಾರಿಕೆ ಹೆಣೆಯುತ್ತಿದ್ದು, ಚುನಾವಣೆ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಆದರೆ, ಸದ್ಯ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ತಲಾ ಎಷ್ಟು ಸ್ಥಾನಗಳು ಲಭಿಸಲಿವೆ ಎಂಬುದು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಎರಡೂ ಪಕ್ಷಗಳ ನಾಯಕರು ಹೇಳುತ್ತಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದ್ದರು. ಆದ್ದರಿಂದಲೇ ಜಿಲ್ಲೆಯ ಆರು ಸ್ಥಾನಗಳ ಪೈಕಿ ನಾಲ್ಕರಲ್ಲಿ ವಿಜಯ ಪತಾಕೆ ಹಾರಿಸಲು ಸಾಧ್ಯವಾಗಿತ್ತು ಎಂಬುದು ಕಾಂಗ್ರೆಸ್‌ ನಾಯಕರ ನಂಬಿಕೆ. ಹಾಗಾಗಿ ಈ ಬಾರಿ ಲೋಕಸಭೆ ಚುನಾವಣೆಗೂ ಇಲ್ಲಿಂದಲೇ ಚಾಲನೆ ನೀಡುವ ಮೂಲಕ ರಾಜ್ಯದಲ್ಲಿ ಹೆಚ್ಚಿನ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

ರಾಹುಲ್‌ ಆಗಮನ: ಮಾರ್ಗ ಬದಲಾವಣೆ
ಬೀದರ: ನಗರಕ್ಕೆ ಸೋಮವಾರ ರಾಹುಲ್‌ ಗಾಂಧಿ  ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆ ಮಾರ್ಗ ಬದಲಾಣೆ ಮಾಡಲಾಗಿದೆ. ಏರ್‌ಬೇಸ್‌ನಿಂದ ತಗಾರೆ ಕ್ರಾಸ್‌ ವರೆಗಿನ ಮಾರ್ಗ ಮತ್ತು ತಗಾರೆ ಕ್ರಾಸ್‌ನಿಂದ ರಂಗ ಮಂದಿರ, ಕನ್ನಡಾಂಬೆ ವೃತ್ತವರೆಗಿನ ಮಾರ್ಗವನ್ನು ಸಾರ್ವಜನಿಕರ ಸಂಚಾರಕ್ಕೆ ನಿಷೇಧಿಸಲಾಗಿದೆ. ಏರ್‌ಬೇಸ್‌ನಿಂದ- ಚಿದ್ರಿ- ಕೇಂದ್ರೀಯ ವಿದ್ಯಾಲಯ, ಗಾಂಧಿ ಗಂಜ್‌ ಮಾರ್ಗ ಹಾಗೂ ಅಂಬೇಡ್ಕರ್‌ ವೃತ್ತದಿಂದ -ಜನವಾಡ ವಾಟರ್‌ ಟ್ಯಾಂಕ್‌ ಮಡಿವಾಳ ವೃತ್ತ, ಬಸ್‌ ನಿಲ್ದಾಣ, ಕ್ಲಾಸಿಕ್‌ ಧಾಬಾ ಮಾರ್ಗವನ್ನು ಸಾರ್ವಜನಿಕರು ಉಪಯೋಗಿಸಬಹುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳನ್ನು ಬಸ್‌ ನಿಲ್ದಾಣ‌ದ ಸಮೀಪದ
ಸಬ್ದಲ್‌ ಬರೀದ್‌ ಶಾಹಿ ಗಾರ್ಡ್‌ನ್‌ ಮೈದಾನ, ಚಿಕ್‌ಪೇಟ್‌ ರಸ್ತೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವಿಐಪಿ ಪಾಸ್‌ ಹೊಂದಿದ
ಗಣ್ಯರ ವಾಹನಗಳನ್ನು ಸಾಯಿ ಶಾಲೆ ಆವರಣ ಮತ್ತು ಗಣೇಶ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ರಂಗಮಂದಿರ ರಸ್ತೆಯಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅನುಮತಿ ಇಲ್ಲ.

ರಾಹುಲ್‌ ಗಾಂಧಿ ಕಾರ್ಯಕ್ರಮ ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಬಿಗಿ ಪೊಲೀಸ್‌
ಬಂದೋಬಸ್ತ ವ್ಯವಸ್ಥೆ ಮಾಡಿಕೊಂಡಿದೆ. ಸುಮಾರು 1200 ಪೊಲೀಸ್‌ ಸಿಬ್ಬಂದಿ ನೇಮಿಸಲಾಗಿದೆ. ಎಸ್‌ಪಿ, ಡಿವೈಎಸ್‌ಪಿ, ಸಿಪಿಐ, ಪಿಎಸ್‌ಐ ಸೇರಿದಂತೆ ಅನೇಕರ ಪ್ರತ್ಯೇಕ ತಂಡ ರಚಿಸಲಾಗಿದೆ. ಆಯಾ ಸ್ಥಳಗಳಲ್ಲಿ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. 

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಬಲೂನ್‌ಗಳು, ಕಪ್ಪು ವಸ್ತ್ರ, ಬೆಂಕಿ ಪೊಟ್ಟಣ, ಹ್ಯಾಂಡ್‌ಬ್ಯಾಗ್‌,
ಸ್ಕೂಲ್‌- ಕಾಲೇಜು ಬ್ಯಾಗ್‌, ಧ್ವಜಗಳು, ಕರ ಪತ್ರಗಳು, ಆಯುಧ, ಬಾಟಲ್‌ಗ‌ಳು, ಬೀಡಿ-ಸಿಗರೇಟ್‌, ತಂಬಾಕು ಉತ್ಪನ ಕೊಂಡೊಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ ಜಿಲ್ಲೆಯಿಂದ ಲೋಕಸಭೆ ಚುನಾವಣೆಗೆ ಚಾಲನೆ ನೀಡಲಾಗುತ್ತಿದೆ. ಸೋಮವಾರ ನಡೆಯುವ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಎಂಬ ವಿಷಯ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಬೀದರ ಕಾರ್ಯಕ್ರಮದ ನಂತರ ಎರಡು ದಿನಗಳ ಕಾಲ ರಾಹುಲ್‌ ಗಾಂಧಿ ಅವರು ತೆಲಂಗಾಣದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
 ದಿನೇಶ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next