ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯತಿಥಿಯಂದು ಕಾಂಗ್ರೆಸ್ ಸೋಮವಾರ ದೇಶಾದ್ಯಂತ ಶ್ರದ್ಧಾಂಜಲಿ ಸಲ್ಲಿಸುತ್ತಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಇಂದಿರಾ ಗಾಂಧಿ ಅವರ ಶಕ್ತಿ ಸ್ಥಳದ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
”ಪ್ರೀತಿ ಮತ್ತು ಮೌಲ್ಯಗಳನ್ನು ಹೃದಯದಲ್ಲಿ ಹೊತ್ತಿದ್ದೇನೆ. ಅಜ್ಜಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಭಾರತವನ್ನು ಒಡೆಯಲು ಬಿಡುವುದಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಅಜ್ಜಿ, ನಾನು ನಿಮ್ಮ ಪ್ರೀತಿ ಮತ್ತು ಮೌಲ್ಯ ಎರಡನ್ನೂ ನನ್ನ ಹೃದಯದಲ್ಲಿ ಹೊತ್ತಿದ್ದೇನೆ. ನೀವು ಯಾವ ಭಾರತಕ್ಕಾಗಿ ನಿಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಿರೋ ಆ ಭಾರತವು ಛಿದ್ರವಾಗಲು ನಾನು ಬಿಡುವುದಿಲ್ಲ”ಎಂದು ಟ್ವೀಟ್ ಮಾಡಿದ್ದಾರೆ.
“ಭಾರತದ ಮೊದಲ ಮಹಿಳಾ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರಿಗೆ ನನ್ನ ನಮನಗಳು. ಕೃಷಿಯಾಗಿರಲಿ, ಆರ್ಥಿಕತೆಯಾಗಿರಲಿ ಅಥವಾ ಮಿಲಿಟರಿ ಶಕ್ತಿಯಾಗಿರಲಿ, ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುವಲ್ಲಿ ಇಂದಿರಾ ಅವರ ಕೊಡುಗೆ ಅನುಪಮವಾಗಿದೆ” ಎಂದು ಖರ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
”ಬಾಂಗ್ಲಾದೇಶದ ವಿಮೋಚನೆಯಿಂದ ಹಸಿರು ಕ್ರಾಂತಿಯ ಪ್ರಾರಂಭದವರೆಗೆ, ಇಂದಿರಾ ಗಾಂಧಿ ರಾಷ್ಟ್ರವನ್ನು ಅದರ ಔನತ್ಯದ ಮೂಲಕ ಮುನ್ನಡೆಸಿದರು. ನಾವು ಅವರ ಮಣಿಯದ ಸ್ಥಿತಿಸ್ಥಾಪಕತ್ವ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ಅಚಲ ದೃಷ್ಟಿಗೆ ವಂದಿಸುತ್ತೇವೆ” ಎಂದು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ.
1984ರಲ್ಲಿ ಇದೇ ದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಇಬ್ಬರು ಭದ್ರತಾ ಸಿಬಂದಿಯಿಂದಲೇ ಹತ್ಯೆಗೀಡಾಗಿದ್ದರು.