Advertisement

ಕಾಂಗ್ರೆಸ್‌ ಪತನದಂಚಿಗೆ: ಸಂಸದ ನಳಿನ್‌ 

12:40 PM Feb 21, 2017 | Team Udayavani |

ಮಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರ ಹಾಗೂ ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ, ದ.ಕ.ಜಿಲ್ಲೆ ವತಿಯಿಂದ ಬೃಹತ್‌ ಪ್ರತಿಭಟನೆಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಆಯೋಜಿಸಲಾಯಿತು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ರಾಜ್ಯ ಸರಕಾರ ಮಜಾವಾದಿಗಳ ಸರಕಾರವೇ ಹೊರತು ಸಮಾಜವಾದಿಗಳ ಸರಕಾರವಲ್ಲ. ಕಾಂಗ್ರೆಸ್‌ ಪತನದಂಚಿಗೆ ಜಾರುತ್ತಿದ್ದು, ಐಸಿಯುನಲ್ಲಿ ಮಲಗಿದಂತಿದೆ. 15 ಮಂದಿ ಶಾಸಕರು ಕಾಂಗ್ರೆಸ್‌ನಿಂದ ಬಿಜೆಪಿ ಸೇರಿಕೊಳ್ಳಲಿದ್ದಾರೆ.  ರಾಜ್ಯದಲ್ಲಿ ಭ್ರಷ್ಟಾಚಾರವಿದೆ, ಸಾಮರಸ್ಯವಿಲ್ಲವೆಂದು ಹೇಳಿ ಅಧಿಕಾರ ಪಡೆದುಕೊಂಡಿದ್ದ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ ಎಂದರು.

ಬಿಜೆಪಿಯತ್ತ ಒಲವು ಕಾಂಗ್ರೆಸ್‌ ಮುಖಂಡರು ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. ಅರ್ಕಾವತಿ, ಸ್ಯಾಂಡ್‌ ಮಾಫಿಯಾ, ಲ್ಯಾಂಡ್‌ ಮಾಫಿಯಾ ಮುಂತಾದ ಹಲವು ಹಗರಣಗಳಲ್ಲಿ ತೊಡಗಿಸಿ ಕೊಂಡಿರುವ ಕಾಂಗ್ರೆಸಿಗರು 4 ವರ್ಷ
ಗಳಲ್ಲಿ ರಾಜ್ಯವನ್ನೇ ಲೂಟಿ ಮಾಡಿ ಖಾಲಿ ಮಾಡಿ ಇಟ್ಟಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಜನರಿಗಿದ್ದ
ಹಲವು ನಿರೀಕ್ಷೆಗಳು ಹುಸಿಯಾಗಿವೆ. ಆದರೆ, ಬಿಜೆಪಿ ಮಾತ್ರ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಎತ್ತಿನಹೊಳೆ ಯೋಜನೆಯಲ್ಲಿಯೂ ಮುಖ್ಯಮಂತ್ರಿಗಳಿಗೆ ಗುತ್ತಿಗೆದಾರರಿಂದ ಕಪ್ಪಕಾಣಿಕೆ ಸಲ್ಲಿಕೆಯಾಗಿರುವುದನ್ನು ಮಾಧ್ಯಮಗಳೇ ತಿಳಿಸಿವೆ. ರಾಜ್ಯ ಸರಕಾರದಲ್ಲಿ ಭ್ರಷ್ಟ ಸಚಿವರೇ ತುಂಬಿ ಹೋಗಿದ್ದು, ಹಗರಣ ಸಿಲುಕಿರುವ ಸಚಿವರು ತತ್‌ಕ್ಷಣದಿಂದ ರಾಜೀನಾಮೆ ನೀಡಬೇಕು. ಸರಕಾರವನ್ನು ಎಚ್ಚರಿಸುವುದು ವಿಪಕ್ಷದ ಜವಾಬ್ದಾರಿ. ಈಗಿನ ಸರಕಾರದಿಂದ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ರಕ್ಷಣಾ ವ್ಯವಸ್ಥೆ ಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಜನತೆಯ ಸಮಸ್ಯೆಗೆ ಸ್ಪಂದನೆ ಇಲ್ಲವಾಗಿದೆ ಎಂದರು.

ರಾಜ್ಯವ್ಯಾಪಿ ಹೋರಾಟ
ಮಾಜಿ ಶಾಸಕ ಎನ್‌. ಯೋಗೀಶ್‌ ಭಟ್‌ ಮಾತನಾಡಿ, ಕಾಂಗ್ರೆಸ್‌ನ ನಿಷ್ಠಾವಂತರೇ ಪಕ್ಷದಿಂದ ಹೊರ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನಾರ್ದನ ಪೂಜಾರಿಯವರ ಮಾತನ್ನು ಮೊದಲೇ ಕೇಳಿದ್ದರೆ ಕಾಂಗ್ರೆಸ್‌ಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಅವರ ಆಡಳಿತ ಕಳಪೆ ಮಟ್ಟದ್ದಾಗಿದ್ದು, ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಯಲಿದೆ ಎಂದರು.

Advertisement

ಬಿಜೆಪಿ ನಾಯಕಿ ಸುಲೋಚನಾ ಭಟ್‌ ಅವರು, ಪಾರದರ್ಶಕ ಆಡಳಿತ ನೀಡುತ್ತೇವೆಂದು ಹೇಳಿ ಆಡಳಿತಕ್ಕೆ ಬಂದ ಕಾಂಗ್ರೆಸ್‌ ಸರಕಾರ ಇಲ್ಲಿಯ ವರೆಗೆ ಜನರ ಯಾವುದೇ ನಿರೀಕ್ಷೆಗಳನ್ನು ಪೂರೈಸಿಲ್ಲ. ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿ ದ್ದಾಗ ಅವರಿಗೆ ಸಮರ್ಥನೆ ನೀಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ.  4 ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ಜನಪರ ಆಡಳಿತ ನೀಡಿಲ್ಲ  ಎಂದರು.

ರಾಜ್ಯಅಲ್ಪಸಂಖ್ಯಾಕ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪದಾಧಿಕಾರಿಗಳಾದ ಕಿಶೋರ್‌ ರೈ, ಬೃಜೇಶ್‌ ಚೌಟ, ಉಮಾನಾಥ ಕೋಟ್ಯಾನ್‌, ಸುದರ್ಶನ ಎಂ., ರಾಮಂಚಂದರ್‌ ಬೈಕಂಪಾಡಿ, ಉಪಮೇಯರ್‌ ಸುಮಿತ್ರಾ ಕರಿಯ, ಮಾಜಿ ಶಾಸಕ ಜಯರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next