ಮಳವಳ್ಳಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ಸ್ಥಾನಗಳನ್ನು ಗೆಲ್ಲುವ ಕಾರ್ಯತಂತ್ರ ರೂಪಿಸಿದ್ದು, ಆ ನಿಟ್ಟಿನಲ್ಲಿ ಪಕ್ಷದ ಸಂಘಟನೆಯತ್ತ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.
ಫೆ.11ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾಲೂಕು ಪ್ರವಾಸ ಹಿನ್ನೆಲೆಯಲ್ಲಿ ಪಟ್ಟಣದ ಟಿಎಪಿಸಿಎಂಎಸ್ ರೈತ ಸಮುದಾಯದ ಭವನದಲ್ಲಿ ಭಾನುವಾರ ನಡೆದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಸ್ಥಾನಗಳನ್ನು ಸೋತಿದ್ದವು. ಇತ್ತೀಚಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಶಕ್ತಿ ಏನೆಂದು ತೋರಿಸಿದ್ದೇವೆ. ಈ ಬಾರಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷದ ನಾಯಕ ಸಿದ್ದರಾಮಯ್ಯ ಜೋಡೆತ್ತನಂತೆ ಪಕ್ಷ ಸಂಘಟನೆಗೆ ಮುಂದಾಗಿದ್ದು, ಈ ಬಾರಿ ನಾವು ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿದಂಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಅದ್ದೂರಿ ಕಾರ್ಯಕ್ರಮ ಆಯೋಜನೆ: ಜಿಲ್ಲೆಯ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ದುಡಿಯಬೇಕು. ಜಿಲ್ಲೆಯ ಚುನಾವಣಾ ಪ್ರವಾಸದ ಮೊದಲ ಭಾಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಳವಳ್ಳಿಯಿಂದಲೇ ಪ್ರಜಾಧ್ವನಿ ಯಾತ್ರೆ ಆರಂ ಭಿಸಿದ್ದು, ಇಲ್ಲಿದಂಲೇ ಗೆಲುವಿನ ಪ್ರಾರಂಭವನ್ನು ಕಾಣಲು ಮುಂದಾಗಬೇಕು, ಚುನಾವಣೆಯ ದೃಷ್ಟಿಯಿಂದ ತಾಲೂಕಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೊದಲ ಪ್ರವಾಸವಾಗಿರುವುದರಿಂದ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲು ನಿಮ್ಮದೇ ಆದ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು. ಪ್ರಮುಖವಾಗಿ ಹಲಗೂರು, ಕಸಬಾ ಹೋಬಳಿಯ ಮುಖಂಡರು ಹೆಚ್ಚಿನ ಜವಾಬ್ದಾರಿಯೊಂದಿಗೆ ನೋಡಿಕೊಳ್ಳಬೇಕು. ಫೆ.11ರ ಮಧ್ಯಾಹ್ನ 2ಕ್ಕೆ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬೈಕ್ ರ್ಯಾಲಿ ಮೂಲಕ ಸ್ವಾಗತ: ತಾಪಂ ಮಾಜಿ ಅಧ್ಯಕ್ಷ ವಿ.ಪಿ.ನಾಗೇಶ್ ಮಾತನಾಡಿ, ಚುನಾವ ಣೆಯ ಸಂಘಟನೆಗೆ ಶಕ್ತಿ ತುಂಬುವ ಉದ್ದೇಶದಿಂದ ಆಗಮಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ಬೃಹತ್ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಾಗುವುದು. ಹಲಗೂರಿನಿಂದ ಹಾಡ್ಲಿ ನಂತರ ಪಟ್ಟಣದ ಬಂದು ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಟಿಎಪಿಸಿಎಂಎಸ್ ಸದಸ್ಯ ಎಚ್.ಬಿ.ಬಸವೇಶ್ ಮಾತನಾಡಿ, ಭಾರತ್ ಜೋಡೋ ಪಾದಯಾ ತ್ರೆಯ ಯಶಸ್ವಿನಂತೆ ಪ್ರಜಾಧ್ವನಿ ಯಾತ್ರೆಗೂ ಗ್ರಾಪಂ ಮುಖಂಡರು ಜವಾಬ್ದಾರಿ ತೆಗೆದು ಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರದ ಉಸ್ತುವಾರಿಗಳಾದ ಅಜ್ಜಹಳ್ಳಿ ರಾಮಕೃಷ್ಣ, ಪುಟ್ಟರಾಮು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ.ದೇವರಾಜು, ಎಸ್.ಪಿ.ಸುಂದರ್ ರಾಜ್, ಕಾರ್ಯಾಧ್ಯಕ್ಷ ಎಂ.ಬಿ.ಮಲ್ಲಯ್ಯ, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ಎಸ್.ದ್ಯಾಪೇಗೌಡ, ಸದಸ್ಯರಾದ ಎಂ.ಲಿಂಗರಾಜು, ಪ್ರಕಾಶ್, ತಾಪಂ ಮಾಜಿ ಅಧ್ಯಕ್ಷ ಆರ್.ಎನ್.ವಿಶ್ವಾಸ್, ಕುಂದೂರು ಪ್ರಕಾಶ್, ಸುಂದರೇಶ್, ಮಾಜಿ ಉಪಾಧ್ಯಕ್ಷ ಸಿ.ಮಾಧು, ಎಪಿಎಂಸಿ ಮಾಜಿ ಅಧ್ಯಕ್ಷ ಮುಟ್ಟನಹಳ್ಳಿ ಅಂಬರೀಶ್, ಮುಖಂಡರಾದ ಕುಳ್ಳಚನ್ನಂಕಯ್ಯ, ಪೆಟ್ರೋಲ್ ಬಂಕ್ ಮಹದೇವು, ದಿಲೀಪ್ ಕುಮಾರ್ ಇದ್ದರು.