Advertisement

ನಾಳೆ ಕೈ ಪಕ್ಷದ ಶಾಸಕಾಂಗ ಸಭೆ ; ಕಡ್ಡಾಯವಾಗಿ ಹಾಜರಾಗುವಂತೆ ಸೂಚನೆ 

01:00 AM Jan 17, 2019 | Team Udayavani |

ಬೆಂಗಳೂರು: ಬಿಜೆಪಿ ಆಪರೇಷನ್‌ ಕಮಲಕ್ಕೆ ಮುಂದಾಗಿರುವುದರಿಂದ ಪಕ್ಷದ ಶಾಸಕರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಶುಕ್ರವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ.

Advertisement

ಅಂದಿನ ಸಭೆಗೆ ಹಾಜರಾಗದವರನ್ನು ಗಂಭೀರವಾಗಿ ಪರಿಗಣಿಸಿ ಕಾಂಗ್ರೆಸ್‌ ಸದಸ್ಯತ್ವವನ್ನು ಸ್ವ ಇಚ್ಛೆಯಿಂದ ಬಿಡಲು ಇಚ್ಛಿಸಿರುವರೆಂದು ಪರಿಗಣಿಸಿ ಸಂವಿಧಾನದ ಪಕ್ಷ ವಿರೋಧಿ ಕಾನೂನು ಕಲಂ 10ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಈಗಾಗಲೇ ಪಕ್ಷದ ನಾಯಕರ ಜೊತೆ ಮುನಿಸಿಕೊಂಡು ಕೆಲವು ಶಾಸಕರು ಬಂಡಾಯ ಸಾರಿರುವುದರಿಂದ ಶಾಸಕಾಂಗ ಪಕ್ಷದ ಸಭೆಗೆ ಎಷ್ಟು ಜನ ಶಾಸಕರು ಹಾಜರಾಗುತ್ತಾರೆ ಎನ್ನುವುದು ಮಹತ್ವದ ವಿಷಯ. ಅಲ್ಲದೇ ಸಂಪುಟ ಪುನಾರಚನೆಯ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿರುವುದರಿಂದ ಅನೇಕ ಶಾಸಕರು ನೇರವಾಗಿಯೇ ಅಸಮಾಧಾನ ಹೊರ ಹಾಕುವ ಸಾಧ್ಯತೆ ಇದೆ.

ಅಲ್ಲದೇ ಸಭೆಯಲ್ಲಿ ಶಾಸಕರ ಅಸಮಾಧಾನ ಸರಿಪಡಿಸಲು ಪಕ್ಷದ ನಾಯಕರು ನೀಡುವ ಭರವಸೆಯ ಸೂತ್ರಗಳನ್ನು ಸಿದ್ದಪಡಿಸಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿ ಸೆಳೆಯಲು ಪ್ರಯತ್ನಿಸಿದ್ದ ಅತೃಪ್ತರನ್ನು ಸಚಿವ ಸ್ಥಾನದ ಭರವಸೆ ನೀಡಿ ವಾಪಸ್‌ ಕರೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿರುವುದರಿಂದ ಅವರಿಗೆ ಅವಕಾಶ ಕಲ್ಪಿಸುವುದಾದರೆ, ಉಳಿದವರೂ ಆಕ್ರೋಶಗೊಳ್ಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next